×
Ad

ವೈದ್ಯಕೀಯ ಕಾಲೇಜಿಗೆ ಅಗತ್ಯ ಸೌಕರ್ಯ ಕಲ್ಪಿಸಿ: ಡಿಸಿ

Update: 2016-07-10 21:17 IST

ಕಾರವಾರ, ಜು.10: ಆಗಸ್ಟ್‌ನಲ್ಲಿ ಆರಂಭವಾಗಲಿರುವ ಕಾರವಾರ ಮೆಡಿಕಲ್ ವೈದ್ಯಕೀಯ ಕಾಲೇಜಿಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೆಡಿಕಲ್ ಕಾಲೇಜು ಸ್ಥಾಪನೆಯಾಗುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾಲೇಜು ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಅಂತಿಮ ಹಂತದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಈ ತಿಂಗಳ ಅಂತ್ಯದೊಳಗೆ ಕಟ್ಟಡವನ್ನು ಹಸ್ತಾಂತರಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಜು. 26ರ ಅಂತ್ಯದೊಳಗೆ ಅಗತ್ಯ ಸೌಲಭ್ಯಗಳ ಪೂರೈಕೆಯಾಗಬೇಕು ಎಂದರು. ಈಗಾಗಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆದಿದ್ದು, ಹಾಸ್ಟೆಲ್‌ಗೆ ಪೀಠೋಪಕರಣ ಜೋಡಣೆಯಂತಹ ಕೆಲಸ ನಡೆಯಬೇಕಿದೆ. ಇದನ್ನು ತಕ್ಷಣ ಪೂರ್ಣಗೊಳಿಸಬೇಕು. ಕಾಲೇಜು ಕಟ್ಟಡದ ಮೂರು ಅಂತಸ್ತನ್ನು ತಿಂಗಳ ಒಳಗೆ ಹಸ್ತಾಂತರಿಸಬೇಕು ಎಂದು ಹಾಸ್ಟೆಲ್ ಪರಿಶೀಲನೆ ವೇಳೆ ಸೂಚಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಕೊರತೆ ಇರುವ ವೈದ್ಯಾಧಿಕಾರಿಗಳ ನೇಮಕ ಪ್ರಕ್ರಿಯೆ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ಕೊರತೆ ಇರುವ ಸಿಬ್ಬಂದಿಯನ್ನು ಭರ್ತಿ ಮಾಡುವುದಾಗಿ ಹೇಳಿದರು. ಆರೋಗ್ಯ ಇಲಾಖೆಯಿಂದ ತಕ್ಷಣ 7ವೈದ್ಯರನ್ನು ನೇಮಿಸುವಂತೆ ಡಿಎಚ್‌ಒ ಅವರಿಗೆ ಸೂಚಿಸಿದರು.

ಇದಲ್ಲದೇ ಮೆಡಿಕಲ್ ಕಾಲೇಜಿಗೆ ನಿರಂತರ ವಿದ್ಯುತ್ ಸರಬರಾಜಾಗಿರಬೇಕು. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಆಟೋಟ ಕ್ರೀಡೆಗಾಗಿ ಕ್ರೀಡಾಂಗಣ ಸೌಲಭ್ಯ ಒದಗಿಸಬೇಕು. ಮಾಲಾದೇವಿ ಮೈದಾನವನ್ನು ಅಭಿವೃದ್ಧಿ ಪಡಿಸಬೇಕು. ಪ್ರಥಮ ವರ್ಷದ ಶೈಕ್ಷಣಿಕ ಚಟುವಟಿಕೆಗೆ ಅನುಕುಲವಾಗವಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಬೇಕು ಎಂದರು. ಯೋಜನೆಗೆ ಪೂರಕವಾಗಿ ಅಗತ್ಯವಿರುವ ಹಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News