ಶೀಘ್ರದಲ್ಲೇ ಗ್ರಾಹಕರಿಗೆ ಲಭಿಸಲಿದೆ ‘ಫ್ರೀಡಂ’

Update: 2016-07-11 08:33 GMT

ಹೊಸದಿಲ್ಲಿ, ಜು.11: ಅತ್ಯಂತ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ತಯಾರಿಸುವುದಾಗಿ ಹೇಳಿ ಭಾರೀ ಸಂಚಲನ ಮೂಡಿಸಿದ್ದ ನೊಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಪ್ರೈ.ಲಿ. ಸಂಸ್ಥೆಯು ಶುಕ್ರವಾರ ತನ್ನ ಫ್ರೀಡಂ 251 ಸ್ಮಾರ್ಟ್ ಫೋನನ್ನು 2,240 ಗ್ರಾಹಕರಿಗೆ ರವಾನಿಸಿದೆ. ಫೋನ್ ಪಡೆದ ಗ್ರಾಹಕರು 40 ರೂ. ಡೆಲಿವರಿ ಚಾರ್ಜ್ ಸೇರಿದಂತೆ 291 ರೂ. ಪಾವತಿಸಬೇಕಾಗಿದೆ.

ಒಟ್ಟು 2,240 ಫೋನುಗಳಲ್ಲಿ 540 ಫೋನುಗಳು ಪಶ್ಚಿಮ ಬಂಗಾಳ ರಾಜ್ಯದ ಗ್ರಾಹಕರಿಗೆ ಕಳುಹಿಸಲ್ಪಟ್ಟರೆ, 290, 605, 484 ಹಾಗೂ 221 ಫೋನುಗಳನ್ನು ಕ್ರಮವಾಗಿ ಹರ್ಯಾಣ, ಹಿಮಾಚಲ ಪ್ರದೇಶ, ಬಿಹಾರ ಹಾಗೂ ಉತ್ತರಾಖಂಡ ರಾಜ್ಯಗಳಿಗೆ ರವಾನಿಸಲಾಗಿವೆ. ಉಳಿದ ಪ್ರಥಮ 5,000 ಗ್ರಾಹಕರಿಗೆ ಜುಲೈ 8 ರೊಳಗಾಗಿ ಫೋನುಗಳನ್ನು ತಲುಪಿಸಲಾಗುವುದೆಂದು ಜುಲೈ 7 ರಂದು ನಡೆದ ಸಮಾರಂಭವೊಂದರಲ್ಲಿ ರಿಂಗಿಂಗ್ ಬೆಲ್ಸ್ ಸಿಇಒ ಮೋಹಿತ್ ಗೋಯೆಲ್ ಹೇಳಿದ್ದಾರೆ.

ಕಂಪೆನಿಯಲ್ಲಿ ಫೋನ್‌ಗಾಗಿ 7.5 ಕೋಟಿಗೂ ಹೆಚ್ಚು ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಪ್ರಥಮ 5,000 ಗ್ರಾಹಕರನ್ನು ಡ್ರಾ ಮೂಲಕ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಂದು ಫ್ರೀಡಂ 251 ಹ್ಯಾಂಡ್ ಸೆಟ್ ತಯಾರಿಸುವಲ್ಲಿ ಕಂಪೆನಿಗೆ 1,180 ರೂ. ವೆಚ್ಚ ತಗಲಿದ್ದು, ಗ್ರಾಹಕರಿಗೆ ಈ ಫೋನನ್ನು 551ರೂ.ಗೆ ಮಾರಾಟ ಮಾಡಲಾಗುವುದರಿಂದ ಪ್ರತಿ ಫೋನ್ ತಯಾರಿಯಲ್ಲಿ ಕಂಪೆನಿಗೆ 930 ರೂ. ನಷ್ಟವಾಗುತ್ತಿದೆಯೆಂದು ಗೋಯೆಲ್ ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ 9,900 ಬೆಲೆಯ ಎಚ್‌ಡಿ ಎಲ್‌ಇಡಿ ಟಿವಿಯನ್ನು ಕೂಡ ಸಂಸ್ಥೆ ಬಿಡುಗಡೆಗೊಳಿಸಿದೆ. ಇದರ ಹೊರತಾಗಿ ನಾಲ್ಕು ಫೀಚರ್ ಫೋನುಗಳು - ಹಿಟ್ (ರೂ. 699), ಕಿಂಗ್ (ರೂ. 899), ಬಾಸ್ (ರೂ. 999) ಹಾಗೂ ರಾಜಾ (ರೂ. 1099)ವನ್ನು ಕೂಡ ಇದೇ ಸಮಾರಂಭದಲ್ಲಿ ಬಿಡುಗಡೆ ಗೊಳಿಸಲಾಯಿತು.

ಕಂಪೆನಿಯ ಇತರ ಎರಡು ಹೊಸ ಸ್ಮಾರ್ಟ್ ಫೋನುಗಳಾದ ಎಲಿಗೆಂಟ್ 3 ಜಿ ಹಾಗೂ ಎಲಿಗೆಂಟ್ 4 ಜಿ ಕ್ರಮವಾಗಿ 3,999 ರೂ. ಹಾಗೂ 4,999 ರೂ. ಗೆ ಲಭ್ಯವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News