ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಉದ್ದೇಶ ಇಲ್ಲ: ಸಚಿವ ಸೀತಾರಾಮ
ಮಡಿಕೇರಿ, ಜು.12: ಡಿವೈಎಸ್‌ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಉದ್ದೇಶ ಇಲ್ಲ.ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆ ನಡೆಸುತ್ತಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ‍್. ಸೀತಾರಾಂ ತಿಳಿಸಿದ್ದಾರೆ.
ರಂಗಸಮುದ್ರದಲ್ಲಿರುವ ಮೃತ ಎಂ.ಕೆ ಗಣಪತಿಯವರ ಮನೆಗೆ ಭೇಟಿ ನೀಡಿದ ಸಚಿವ ಸೀತಾರಾಮ ಅವರು ಗಣಪತಿ ತಂದೆ ಕುಶಾಲಪ್ಪ, ಪತ್ನಿ ಪಾವನಾ ಮತ್ತು ಮಗ ನೇಹಾಲ್ ಅವರೊಂದಿಗೆ ಮಾತಕತೆ ನಡೆಸಿದರು.ಗಣಪತಿ ಸಾವಿನ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸುವಂತೆ ಅವರ ಕುಟುಂಬ ಮನವಿ ಮಾಡಿತು.
"ನಾನು ಸರಕಾರದ ಪರವಾಗಿ ಗಣಪತಿ ಮನೆಗೆ ಬಂದಿದ್ದೇನೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ ” ಎಂದು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೀತಾರಾಮ ತಿಳಿಸಿದರು.
"ಗಣಪತಿ ಅವರು ಮೂರು ವರ್ಷಗಳ ಕಾಲ ನನ್ನ ಕ್ಷೇತ್ರದಲ್ಲೇ ಇನ್ಸ್ ಪೆಕ್ಟರ್ ಆಗಿದ್ದರು. ವೈಯಕ್ತಿಕವಾಗಿ ಅವರ ಸಾವು ನೋವು ತಂದಿದೆ" ಎಂದು ಸಚಿವರು ಹೇಳಿದರು.
" ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಸರಕಾರಕ್ಕೆ ಆಸಕ್ತಿ ಇಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸಿಬಿಐಗೆ ವಹಿಸಿಕೊಟ್ಟಿರುವ ಐದು ಪ್ರಕರಣದ ತನಿಖೆಯ ವರದಿ ಇನ್ನೂ ಬಂದಿಲ್ಲ ಎಂದು ಸೀತಾರಾಮ ತಿಳಿಸಿದರು.