ಹಾಸನ: ಸಚಿವ ಸಂಪುಟದಿಂದ ಕೆ.ಜೆ. ಜಾರ್ಜ್ ಕೈಬಿಡಲು ಆಗ್ರಹಿಸಿ ಬಿಜೆಪಿಯಿಂದ ಧರಣಿ
ಹಾಸನ, ಜು.12: ದಕ್ಷ ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಕೆ.ಜೆ. ಜಾರ್ಜ್‌ರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಬೃಹತ್ ಧರಣಿ ನಡೆಯಿತು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ದುಡಿಯುತ್ತಿರುವ ಅಧಿಕಾರಿಗಳು ಇತ್ತಿಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ನಾಲ್ಕು ದಿವಸಗಳ ಹಿಂದೆಯಷ್ಟೆ ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರು ಎಸ್ಪಿಯ ಕಿರುಕುಳ ಹಾಗೂ ಹಲವು ಪ್ರಕರಣಗಳ ಬಗ್ಗೆ ಒತ್ತಡ ಹೇರಿದ್ದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸಿ ಆತ್ಮಹತ್ಯೆಯಂತಹ ದಾರಿ ಹಿಡಿಯಲು ಕಾರಣವಾಗಿದೆ ಎಂದು ದೂರಿದರು.
ಮತ್ತೊಬ್ಬ ಪೊಲೀಸ್ ಅಧಿಕಾರಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಎಂ.ಕೆ. ಗಣಪತಿ ಕೂಡ ರಾಜಕೀಯ ನಾಯಕರ ಕಿರುಕುಳದಿಂದ ಬೇಸತ್ತು ಬಲಿಪಶುವಾಗಿದ್ದಾರೆ. ಇದಕ್ಕೆ ಮೊದಲು ಕೆ.ಜೆ. ಜಾರ್ಜ್ ಹೆಸರನ್ನು ಕೂಡ ಪ್ರಸ್ತಾಪ ಮಾಡಿದ್ದಾರೆ. ಆದರೂ ಮುಖ್ಯಮಂತ್ರಿಗಳು ಸಮರ್ಥಿಸಿ ಕೊಂಡಿರುವುದರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡುವುದು ಅಸಾಧ್ಯವಾಗಿದೆ. ಆದರೆ, ಇದುವರೆಗೂ ರಾಜ್ಯ ಸರಕಾರ ನಿರ್ಲಕ್ಷ್ಯವನ್ನು ಪ್ರದರ್ಶಿಸುತ್ತಿದೆ ಎಂದು ದೂರಿದರು.
ರಾಜಕೀಯ ಒತ್ತಡ ಮತ್ತು ಹಿರಿಯ ಅಧಿಕಾರಿಗಳ ಕಿರುಕುಳವೇ ಬಹುತೇಕ ಎಲ್ಲಾ ಪ್ರಕರಣಗಳಿಗೆ ಕಾರಣವಾಗಿರುವುದು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಸಂವಿಧಾನ ಬದ್ಧವಾಗಿ ಆಡಳಿತ ನಡೆಸುವ ಪ್ರತಿಜ್ಞೆ ಕೈಗೊಂಡಿದ್ದ ಸರಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತದ ಮೇಲೆ ಜನತೆ ಸಂಪೂರ್ಣ ಭರವಸೆ ಕಳೆದುಕೊಂಡಿದ್ದಾರೆ. ಕೂಡಲೇ ಸಚಿವ ಕೆ.ಜೆ. ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಧರಣಿಯಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಯೋಗಾರಮೇಶ್, ತಾಲ್ಲೂಕ್ ಅಧ್ಯಕ್ಷರಾದ ಅಗಿಲೆ ಯೋಗಿಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಮುಖಂಡರಾದ ಡಿ.ವೈ. ಗೋಪಾಲ್, ಪ್ರೀತವ್ಗೌಡ, ಶಂಕರಗೌಡ, ವೇಣುಗೋಪಾಲ್, ಕಟ್ಟಾಯ ಅಶೋಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಾಗೇಶ್, ನಗರಾಧ್ಯಕ್ಷರಾದ ಶೋಬಾನ್ ಬಾಬು, ಪರ್ವತಯ್ಯ, ಪುನೀತ್, ಮಂಜುನಾಥ್ ಶರ್ಮ, ಇತರರು ಪಾಲ್ಗೊಂಡಿದ್ದರು.