ಹಾಸನ: ಡಿಸಿ ಕಚೇರಿ ಮುಂದೆ ಪ್ರಗತಿಪರ ಸಂಘಟನೆಗಳಿಂದ ಧರಣಿ
Update: 2016-07-12 18:46 IST
ಹಾಸನ, ಜು.12: ಹಾಸನದ ಉಪವಿಭಾಗಾಧಿಕಾರಿಯಾಗಿ ನೂತನವಾಗಿ ಬಂದಿರುವ ನಾಗರಾಜ್ ಮುಂದುವರಿಯಲಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಧರಣಿ ನಡೆಯಿತು.
ನೂತನ ಉಪವಿಭಾಗಾಧಿಕಾರಿಯಾಗಿ ಹಾಸನಕ್ಕೆ ಬಂದಿರುವ ನಾಗರಾಜ್ ಕರ್ತವ್ಯ ನಿರ್ವಹಿಸಲು ಆರಂಭಿಸಿ ಕೇವಲ 14 ದಿನಗಳಾಗಿವೆ. ಇವರು, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದು, ಜನರ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ. ರೈತರು ಅತ್ಯಂತ ಸಂಕಷ್ಟದಲ್ಲಿದ್ದು, ನಾಗರಾಜುರಂತವರು ಎಸಿ ಹುದ್ದೆಯಲ್ಲಿದ್ದರೆ ಕನಿಷ್ಠ ಅನುಕೂಲಗಳಾದರೂ ರೈತರಿಗೆ ತಲುಪಬಹುದು. ಈ ಹಿನ್ನೆಲೆಯಲ್ಲಿ ನಾಗರಾಜು ಅವರನ್ನೇ ಹಾಸನದ ಉಪವಿಭಾಗಾಧಿಕಾರಿಯನ್ನಾಗಿ ಮುಂದುವರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಧರಣಿಯಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮಂಜೇಗೌಡ, ಸಂಚಾಲಕ ರಾಜಶೇಖರ್, ಎವರ್ ಗ್ರೀನ್ ಸಂಸ್ಥೆಯ ರಾಜಕುಮಾರ್, ಪರಿಸರ ಪ್ರೇಮಿ ಅಶೋಕ್, ನಾಗರತ್ನ ಇತರರು ಪಾಲ್ಗೊಂಡಿದ್ದರು.