ಸಕಾಲದಲ್ಲಿ ಸಾಲ ತೀರಿಸಿದರೆ ಬ್ಯಾಂಕ್ ಅತ್ಯುತ್ತಮ ಗೆಳೆಯನಾಗುತ್ತದೆ: ನಾಣಯ್ಯ
ಕುಶಾಲನಗರ, ಜು.12: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ನಬಾರ್ಡ್ 35 ವರ್ಷದಿಂದ ದೇಶದಲ್ಲಿ ಉತ್ತಮ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಹಾಕಿಕೊಂಡು ಬಂದಿದೆ. ಆದರೆ ಸ್ವಾತಂತ್ರ ಬಂದು ಇಷ್ಟುವರ್ಷವಾದರೂ ನಮ್ಮ ದೇಶದ ಹಳ್ಳಿಗಳಲ್ಲಿ ಶೇ.50ರಷ್ಟು ಜನರು ಬ್ಯಾಂಕ್ ಖಾತೆ ತೆರೆಯದಿರುವುದು ಗೋಚರವಾದ ವಿಷಯವಾಗಿದೆ. ಆದ್ದರಿಂದ ಪ್ರಧಾನ ಮಂತ್ರಿ ಮೋದಿಯವರ ಯೋಜನೆಯಾದ ‘ಜನ-ಧನ್’ ಬಗ್ಗೆ ತಿಳಿಹೇಳುತ್ತಾ, ಪ್ರತಿಯೊಬ್ಬರು ಅರ್ಥಿಕವಾಗಿ ದೇಶವನ್ನು ಬೆಳೆಸಬೇಕಾದರೆ ಉಳಿತಾಯ ಖಾತೆ ತೆರೆಯಬೇಕು ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಬಿ.ಡಿ ಮಂಜುನಾಥ್ ಹೇಳಿದ್ದಾರೆ.
ನಬಾರ್ಡ್ ಸಂಸ್ಥಾಪನ ದಿವಸದ ಅಂಗವಾಗಿ ಓ.ಡಿ.ಪಿ ಮೈಸೂರು ಆಯೋಜಿಸಿದ್ದ ‘ಆರ್ಥಿಕ ಸೇರ್ಪಡೆ ಮತ್ತು ಆರ್ಥಿಕ ಶಿಕ್ಷಣ ಬಗ್ಗೆ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲೀಡ್ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ದೇವಯ್ಯ ಮಾತನಾಡಿ, ಸ್ವಸಂಘ ಸಂಸ್ಥೆಗಳಿಗೆ ಸಾಲ ನೀಡುತ್ತಿರುವುದಲ್ಲದೆ ಜೀವನ ಸುರಕ್ಷತಾ ಯೋಜನೆ, ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳು ನಬಾರ್ಡ್ ಬ್ಯಾಂಕ್‌ನೊಳಗೆ ಬರುವುದರಿಂದ ಎಲ್ಲ್ಲ ಕೃಷಿಕರು ಮತ್ತು ನಾಗರಿಕರು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಮನದಟ್ಟು ಮಾಡಿದರು. ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ. ನಾಣಯ್ಯ ಮಾತನಾಡಿ, ಬ್ಯಾಂಕ್‌ಗಳಲ್ಲಿ ಸಾಲವನ್ನು ತೆಗೆದುಕೊಂಡು ಮೋಜು-ಮಸ್ತಿ ಮಾಡುವುದರ ಬದಲು ಹೇಗೆ ಬಳಸಿಕೊಳ್ಳಬೇಕು? ಹೂಡಿಕೆಗಳ ಕಡೆಗೆ ಗಮನ ಹರಿಸಿ, ಸಕಾಲದಲ್ಲಿ ಸಾಲ ತೀರಿಸಿದರೆ ಬ್ಯಾಂಕ್ ಅತ್ಯುತ್ತಮ ಗೆಳೆಯನಾಗುವುದರೊಂದಿಗೆ ನಿಮ್ಮ ಜೀವನ ಕೂಡ ಉತ್ತಮ ಶೈಲಿಯಾಗಿ ಬದಲಾಗುತ್ತದೆ ಎಂದು ಹೇಳಿದರು. ಹಾಗೆಯೇ ದೇಶದ ಪ್ರಗತಿ ಮತ್ತು ಅಭಿವೃದ್ಧ್ದಿ ದೃಷ್ಟಿಯಿಂದಲೂ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಅಗತ್ಯವೆಂದರು.
ಈ ಸಂದರ್ಭದಲ್ಲಿ ಕೊ.ಜಿಪಂ ಸದಸ್ಯೆ ಕು.ಮಂಜುಳಾ ನಬಾರ್ಡ್ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪುಸ್ತಕ ಬಿಡುಗಡೆ ಮಾಡಿದರು. ದಿ.ದೇವರಾಜ್ ಅಭಿವೃದ್ಧ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸುರೇಶ್ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೊ.ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಪಂ ಗುಡ್ಡೆಹೊಸೂರಿನ ಸದಸ್ಯೆ ಪುಷ್ಪಾ ಜನಾರ್ದನ್, ಕಾರ್ಪೊರೇಶನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ನಾಗೇಂದ್ರ, ಮೈಸೂರು ಓಡಿಪಿ ಸಂಚಾಲಕ ಮೋಲಿ ಪುಡ್ತಾದೊ, ಕೊಡಗು ಜಿಲ್ಲಾ ಸಂಯೋಜಕ ಜಾಯ್ಯಿ ಮೆನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಮಹಿಳಾ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು.