ಅಧಿಕಾರಿಗಳ ನಿರ್ಲಕ್ಷ: ರೈತರ ಪ್ರತಿಭಟನೆ
ಸೊರಬ, ಜು.12: ಅಧಿಕಾರಿಗಳು ರೈತರ ಜಮೀನುಗಳಿಗೆ ಖುದ್ದಾಗಿ ಹೋಗಿ ಪರಿಶೀಲನೆ ಮಾಡದೇ, ಸರಕಾರಿ ಕಚೇರಿಯಲ್ಲಿ ಕುಳಿತು ಸುಳ್ಳು ದಾಖಲೆಗಳನ್ನು ತಯಾರು ಮಾಡಿ, ಸರಕಾರಕ್ಕೆ ತಪ್ಪು ಮಾಹಿತಿ ರವಾನಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ರೈತ ಮುಖಂಡ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಆನವಟ್ಟಿಯ ವಿಠ್ಠಲ ದೇವಸ್ಥಾನದಿಂದ ನಾಡ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ಅಧಿಕಾರಿಗಳ ನೀರ್ಲಕ್ಷ್ಯದಿಂದ ಬೆಳೆವಿಮೆ ಬಾರದಿರುವುದನ್ನು ಖಂಡಿಸಿ ರೈತ ಸಂಘದ ಚೌಟಿ ಶಿವಕುಮಾರ ಮುಖಂಡತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಶಿವಕುಮಾರ್, ಸೊರಬ ತಾಲೂಕು ಬರಪೀಡಿತ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ ತತ್ತೂರು ಹೋಬಳಿಯನ್ನು ಬರಪೀಡಿತ ಪ್ರದೇಶ ಎಂದು ಅಧಿಕಾರಿಗಳು ಗುರುತಿಸಿಲ್ಲ. ಅಧಿಕಾರಿಗಳ ಈ ನೀರ್ಲಕ್ಷ್ಯತೆಯಿಂದ ರೈತರು ಅತ್ಮಹತ್ಯೆ ಮಾಡಿಕೊಂಡರೆ ನೇರ ಹೊಣೆ ಅಧಿಕಾರಿಗಳೇ ಎಂದು ಎಚ್ಚರಿಕೆ ನೀಡಿದರು
ಕೂಡಲೇ ಬೆಳೆ ಪರಿಹಾರ ನೀಡದಿದ್ದರೆ ಜಿಲ್ಲಾ, ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಪರಿಹಾರ ಒದಗಿಸುವ ತನಕ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಉಪ ತಹಶೀಲ್ದಾರ್ ಬಸವರಾಜಪ್ಪ ಮಾತನಾಡಿ, ಈಗಿನ ತಹಶೀಲ್ದಾರರು ಭಡ್ತಿ ಪಡೆದು ಬೇರೆ ಕಡೆ ಹೋಗಿದ್ದಾರೆ. ಹೊಸ ತಹಶೀಲ್ದಾರರು ಬಂದ ಕೊಡಲೇ ಅವರೊಂದಿಗೆ ಚರ್ಚಿಸಿ ದಾಖಲೆಗಳನ್ನು ತರಿಸಿ ನಿಮ್ಮ ಸಮಕ್ಷಮದಲ್ಲೆ ಸೂಕ್ತರೀತಿಯಲ್ಲಿ ಬೆಳೆಪರಿಹಾರ ಕೊಡಿಸಲು ಕ್ರಮಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಂಗಾರಪ್ಪ ಗಂಗೊಳ್ಳಿ ಜಯಶೀಲಪ್ಪ, ಸತೀಶ, ಸುರೇಶ, ಜಗದೇವಪ್ಪ, ಲೋಕಪ್ಪ, ರಂಗಪ್ಪ ಗಂಗೂಳ್ಳಿ, ಲಕ್ಷ್ಮಪ್ಪ ಗಂಗೂಳ್ಳಿ, ನೂರಾರು ರೈತರು ಪಾಲ್ಗೊಂಡಿದ್ದರು.