×
Ad

‘ಪ್ರಧಾನಿ ಉದ್ಯಮಿಗಳ ಓಲೈಕೆಯಲ್ಲಿ ತೊಡಗಿದ್ದಾರೆ

Update: 2016-07-12 22:13 IST

ಶಿವಮೊಗ್ಗ, ಜು.12: ಬಿಜೆಪಿ ನೇತೃತ್ವದ ಕೇಂದ್ರ ಎನ್‌ಡಿಎ ಸರಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೃಷಿ ಸಬ್ಸಿಡಿ ಕಡಿತಗೊಳಿಸುವ ಮೂಲಕ ಅನ್ನದಾತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗವು ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುವುದಕ್ಕೂ ಮುನ್ನ ರೈತರಿಗೆ ಹತ್ತು ಹಲವು ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಅನ್ನದಾತರಿಗೆ ಹೊರೆಯಾಗಿ ಪರಿಣಮಿಸಿದ್ದಾರೆ. ಉದ್ಯಮಿಗಳ ಓಲೈಕೆಯಲ್ಲಿ ತೊಡಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಕೇಂದ್ರ ಸರಕಾರವು ಎರಡು ವರ್ಷ ಪೂರೈಸುವ ಹಂತದಲ್ಲಿದೆ. ಆದರೆ ರೈತರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇದು ಕೇಂದ್ರ ಸರಕಾರದ ರೈತರ ಪರ ಇರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಬೆಳೆಗಳಿಗೆ ಶೇ. 15 ರಷ್ಟು ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿತ್ತು.ಆದರೆ ಬಿಜೆಪಿ ಸರಕಾರವು ಕೇವಲ ಶೇ. 4.5 ರಷ್ಟು ಮಾತ್ರ ಹೆಚ್ಚಿ ಸಿದೆ. ಸಣ್ಣ ಟ್ರ್ಯಾಕ್ಟರ್‌ಗಳಿಗೆ ನೀಡುವ ಸಬ್ಸಿಡಿಯನ್ನು ಹಿಂಪಡೆಯಲು ನಿರ್ಧರಿಸಿದೆ. ರಾಷ್ಟ್ರೀಯ ತೋಟಗಾರಿಕೆ ಬೋರ್ಡ್‌ನಿಂದ ರೈತರಿಗೆ ಕೊಡುತ್ತಿರುವ ಸಬ್ಸಿಡಿಯನ್ನು ಪೂರ್ಣವಾಗಿ ನಿಲ್ಲಿಸಲಾಗಿದೆ. ತಕ್ಷಣವೇ ಕೇಂದ್ರ ಸರಕಾರ ತನ್ನ ರೈತ ವಿರೋಧಿ ಧೋರಣೆ ನಿಲ್ಲಿಸಬೇಕು. ರೈತ ಹಿತಾಸಕ್ತಿ ರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಗರದ ಮಹದೇವಪ್ಪ, ರಾಜ್ಯ ಕಾಂಗ್ರೆಸ್ ಸೇವಾದಳ ಸಮನ್ವಯ ಸಮಿತಿಯ ಸದಸ್ಯರಾದ ವೈ.ಎಚ್.ನಾಗರಾಜ್, ಹಿರಿಯ ಮುಖಂಡ ರಾಮೇಗೌಡ, ಎನ್‌ಎಸ್‌ಯುಐ ಮುಖಂಡರಾದ ಶ್ರೀಜಿತ್, ಯುವ ಕಾಂಗ್ರೆಸ್ ಮುಖಂಡ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News