×
Ad

‘ಸಂಚಾರಿ ನಿಯಮ ಉಲ್ಲಂಘಿಸಿದರೆ ಕ್ರಮ’

Update: 2016-07-12 22:16 IST

 ಸಾಗರ,ಜು.12: ಕರ್ಕಶ ಶಬ್ದ ಮಾಡುವ ಹಾರ್ನ್‌ಗಳನ್ನು ವಾಹನಗಳಲ್ಲಿ ಉಪಯೋಗಿಸಬಾರದು. ಮೋಟಾರ್ ವಾಹನ ಕಾಯ್ದೆಯಡಿ ಇದರ ಮೇಲೆ ನಿಷೇಧವಿದ್ದರೂ ಅದನ್ನು ಉಪಯೋಗಿಸಲಾಗುತ್ತಿದೆ ಎಂದು ಎಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಮಂಗಳವಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆ ವತಿಯಿಂದ ಕರ್ಕಶ ಶಬ್ದ ಮಾಡುವ ಹಾರ್ನ್‌ಗಳನ್ನು ಅಳವಡಿಸಿದ್ದ ವಾಹನಗಳ ತಪಾಸಣೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂತಹ ಹಾರ್ನ್ ಬಳಸುವ ವಾಹನಗಳಿಗೆ ರೂ. 2 ಸಾವಿರ ರೂ.ವನ್ನು ಪ್ರಥಮ ಹಂತದಲ್ಲಿ ದಂಡ ವಿಧಿಸಲು ಅವಕಾಶವಿದೆ ಎಂದರು. ಕರ್ಕಶ ಶಬ್ದ ಮಾಡುವ ಹಾರ್ನ್‌ಗಳಿಂದ ಶಾಲಾ ಕಾಲೇಜುಗಳಿಗೆ, ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಶಬ್ದ ಮಾಲಿನ್ಯಕ್ಕೆ ಕಾರಣವಾಗಿರುವ ಇಂತಹ ಹಾರ್ನ್ ಗಳನ್ನು ವಾಹನ ಮಾಲಕರು ಹಾಗೂ ಚಾಲಕರು ಉಪಯೋಗಿಸಬಾರದು. ಇದರಿಂದ ಹೃದಯ ಸಂಬಂಧಿ ಕಾಯಿಲೆ ಸಹ ಬರುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ತಿಳಿಸಿದರು. ನಮ್ಮ ಇಲಾಖೆ ಹಾಗೂ ಸಾರಿಗೆ ಇಲಾಖೆ ಜಂಟಿಯಾಗಿ ಸುಮಾರು 40ಕ್ಕೂ ಹೆಚ್ಚು ವಾಹನಗಳ ತಪಾಸಣೆ ನಡೆಸಿ ಹಾರ್ನ್‌ಗಳನ್ನು ತೆರವುಗೊಳಿಸಿ, ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರಿಗೆ ವಾಹನಗಳಿಂದ ತೊಂದರೆಯಾಗಬಾರದು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದರು.

ನಗರವ್ಯಾಪ್ತಿಯಲ್ಲಿ ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಇಲಾಖೆಯ ನಿಯಮಾವಳಿಗೆ ಸ್ಪಂದಿಸಬೇಕು. ಇಲಾಖೆ ವತಿಯಿಂದ ಪ್ರತಿ ರಸ್ತೆಗಳಲ್ಲೂ ವಾಹನ ನಿಲುಗಡೆ ದಿನವನ್ನು ನಿಗದಿಪಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ವಾಹನ ನಿಲುಗಡೆ ಮಾಡಬೇಕು. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ್ದ ಕಾನೂನು ಕ್ರಮ ಜರಗಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News