ಬಾಲಕಿಯರ ನಿಲಯಕ್ಕೆ ತಾಪಂ ಅಧ್ಯಕ್ಷರಿಂದ ದಿಢೀರ್ ಭೇಟಿ
ಮೂಡಿಗೆರೆ, ಜು.12: ಪಟ್ಟಣದ ಚತ್ರಮೈದಾನ ದಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಆಲಿಸಿದರು.
ತಾಲೂಕಿನಲ್ಲಿರುವ ಅನೇಕ ಹಾಸ್ಟೆಲ್‌ಗಳಲ್ಲಿ ವಿವಿಧ ರೀತಿಯ ಕುಂದುಕೊರತೆಗಳನ್ನು ಅರಿತ ತಾಪಂ ಅಧ್ಯಕ್ಷ ಕೆ.ಸಿ.ರತನ್ ವಾರದಲ್ಲಿ ಒಂದು ಅಥವಾ ಎರಡು ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಲು ಆರಂಭಿಸಿದ್ದಾರೆ. ಚತ್ರಮೈದಾನದಲ್ಲಿರುವ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ಸಮಯದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಬುಕ್ಕನ್ನು ತರುವಂತೆ ವಾರ್ಡನ್‌ಗೆ ತಿಳಿಸಿ, ವಿದ್ಯಾರ್ಥಿಗಳು ಎಷ್ಟಿದ್ದಾರೆಂದು ಮಾಹಿತಿ ತಿಳಿದುಕೊಂಡರು. ಹಾಜರಾತಿಯಲ್ಲಿದ್ದ 44 ವಿದ್ಯಾರ್ಥಿಗಳ ಪೈಕಿ 36 ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು. ಉಳಿದ ವಿದ್ಯಾರ್ಥಿಗಳು ಎಲ್ಲಿ ಎಂದು ಕೇಳಿದಾಗ, ವಿದ್ಯಾರ್ಥಿಗಳು ಮಾತು ಕೇಳುವುದಿಲ್ಲ. ನಮ್ಮನ್ನೇ ಗದರಿಸುತ್ತಾರೆ ಎಂಬ ಉತ್ತರ ವಾರ್ಡನ್‌ಗಳಿಂದ ಕೇಳಿಬಂತು. ಇದನ್ನು ಆಲಿಸಿದ ತಾಪಂ ಅಧ್ಯಕ್ಷ ಇನ್ನು ಮುಂದೆ ಎಲ್ಲಾ ವಾರ್ಡನ್‌ಗಳು ಶಿಸ್ತಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಎಲ್ಲಿ ಹೋಗಬೇಕಾದರೂ ಅವರ ಬರವಣಿಗೆಯಿಂದ ಪತ್ರ ಬರೆಸಿಕೊಳ್ಳಿ. ಮಾತು ಕೇಳದ ವಿದ್ಯಾರ್ಥಿಗಳಿದ್ದರೆ ಅವರ ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿಸಿ ಸರಿ ಮಾಡುವ ಕೆಲಸ ಮಾಡಬೇಕು ಎಂದರು.
ಇದಕ್ಕೂ ಮುನ್ನ ಹಾಸ್ಟೆಲ್‌ಗೆ ಭೇಟಿ ನೀಡಿದ ವೇಳೆ ವಿದ್ಯುತ್ ಮತ್ತು ಯುಪಿಎಸ್ ಕೈಕೊಟ್ಟ ಕಾರಣ ವಿದ್ಯಾರ್ಥಿನಿಯರು ಕತ್ತಲೆ ಕೋಣೆಯಲ್ಲಿ ಇರುವುದು ಕಂಡು ಬಂದಿತು. ಬಳಿಕ ಸಮಸ್ಯೆ ಸರಿಪಡಿಸುವ ಬಗ್ಗೆ ಸಂಬಂಧಿಸಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಅಲ್ಲದೆ, ವಾರ್ಡನ್‌ಗಳಿಗೆ ಶಿಸ್ತುಪಾಲನೆ ಸರಿಯಿಲ್ಲ. ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲಿ ದಿನನಿತ್ಯ ಬಳಕೆಯಾಗುವ ಪದಾರ್ಥ ಹಾಗೂ ಇನ್ನಿತರ ಬಗ್ಗೆ ಪುಸ್ತಕದಲ್ಲಿ ದಾಖಲಾತಿ ಇರಬೇಕು ಎಂದರು.
ಈ ವೇಳೆ ಹೆಸಗಲ್ ಗ್ರಾಪಂ ಸದಸ್ಯರಾದ ಹೆಸಗಲ್‌ಗಿರೀಶ್, ಪ್ರಶಾಂತ್, ವಾರ್ಡನ್ ಝುಲೇಕಾ, ಜೆ.ಎಸ್.ರಘು, ಹಳೆಮೂಡಿಗೆರೆ ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.