ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ
ಚಿಕ್ಕಮಗಳೂರು, ಜು.12 ಇಲ್ಲಿನ ಲಿಂಗದಹಳ್ಳಿಗೆ ನೂತನವಾಗಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರನ್ನು ಈ ಸಂಬಂಧ ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಗ್ರಾಮಸ್ಥರು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಹುಣಸೆಬೈಲಿನಿಂದ ರೋಪ್ ಲೈನ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 3.59 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ದೂರಿದರು.
ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಶೇ.90 ರಷ್ಟು ಪೂರ್ಣಗೊಂಡಿದ್ದು, ಅಂದಾಜು ಪತ್ರ ಪ್ರಕಾರ ರಸ್ತೆಯ ಎರಡೂ ಬದಿಗಳಲ್ಲಿ ಡ್ರೈನೇಜ್‌ಗಳನ್ನು ನಿರ್ಮಾಣ ಮಾಡಿಲ್ಲ. ಕಾಮಗಾರಿ ವೇಳೆ ಕಡಿದುರುಳಿಸಿರುವ ಭಾರೀ ಗಾತ್ರದ ಮರಗಳನ್ನು ತೆರವುಗೊಳಿಸಿಲ್ಲ. ರಸ್ತೆಯ ಪಕ್ಕದಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ತೆಗೆದಿಲ್ಲ ಎಂದು ಆರೋಪಿಸಿದರು.
ಅತ್ಯಂತ ತೆಳುವಾಗಿ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಸೇತುವೆ ಕಾಮಗಾರಿಯನ್ನು ಮಾಡಲಾಗಿಲ್ಲ. ಇದರಿಂದಾಗಿ ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮತ್ತು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರುವುದರ ಜೊತೆಗೆ ರಸ್ತೆ ಕಾಮಗಾರಿಯ ಫೋಟೊಗಳನ್ನು ಜಿಲ್ಲಾಧಿಕಾರಿಗಳಿಗೆ ಪ್ರದರ್ಶಿಸಿದರು.
ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು, ಕಳಪೆ ಕಾಮಗಾರಿಗೆ ಕಾರಣವಾಗಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಮಗಾರಿಯ ಬಿಲ್ಲಿನ ಪಾವತಿಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಮುಹಮ್ಮದ್, ಅಶೋಕ, ರಾಧಾಕೃಷ್ಣ, ಶಶಿಧರ, ಎನ್.ಶಶಿ, ಮಂಜುನಾಥ್ ಉಪಸ್ಥಿತರಿದ್ದರು.