ಚಿಕಿತ್ಸೆ ನೀಡಲು ನಿರಾಕರಿಸಿದ ಸಿಬ್ಬಂದಿ: ರೋಗಿ ಮೃತು್ಯ
ಅಂಕೋಲಾ, ಜು.13: ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲ್ಲಿ ಮಂಗಳವಾರ ಬೆಳಗಿನ ಜಾವ ಭಾವಿಕೇರಿಯಿಂದ ಬಂದ ರೋಗಿಯೋರ್ವರಿಗೆ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿರುವುದರಿಂದ ಆತನ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಕಾರಣರಾಗಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಬುಧವಾರ ಪಟ್ಟಣದ ಕಮಲಾ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಭಾವಿಕೇರಿ ಕಾನಬೀರ ಕೊಪ್ಪದ ಅರವಿಂದ ವಿಷ್ಣು ಆಚಾರಿ (50)ಮೃತ ವ್ಯಕ್ತಿ. ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು ಮನೆಯವರು ಮಂಗಳವಾರ ಬೆಳಗೆ ಜಾವ ಆಸ್ಪತ್ರೆಗೆ ಕರೆ ತಂದರು. ಆದರೆ ಅಲ್ಲಿದ್ದ ಸಿಬ್ಬಂದಿ ರೋಗಿಗೆ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿದರು ಎಂದು ಆರೋಪಿಸಲಾಗಿದೆ. ಬಳಿಕ ಆರ್ಯ ಮೆಡಿಕಲ್ ಸೆಂಟರ್ ಹಾಗೂ ಕ್ರಿಸ್ತ ಮಿತ್ರ ಆಶ್ರಮ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಲ್ಲಿಯೂ ಕೂಡ ಸಿಬ್ಬಂದಿಯಿಂದ ಸ್ಪಂದನೆ ಸಿಗದಿದ್ದರಿಂದಾಗಿ ದಿಕ್ಕು ತೋಚದೆ ಇವರು ಕುಮಟಾದ ಆಸ್ಪತ್ರೆಗೆ ತೆರಳಿದರು.
ಕುಮಟಾದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸಲು ವೈದ್ಯರು ಸೂಚಿಸಿದರು. ಅದರಂತೆ ಮಣಿಪಾಲಕ್ಕೆ ತೆರಳುತ್ತಿದ್ದಾಗ ಕುಂದಾಪುರ ಸಮೀಪ ದಾರಿ ಮಧ್ಯದಲ್ಲಿಯೇ ಅರವಿಂದ ಆಚಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿಯೇ ರೋಗಿಗೆ ಚಿಕಿತ್ಸೆ ದೊರೆತಿದ್ದಲ್ಲಿ ಆತ ಬದುಕುಳಿಯುವ ಸಾಧ್ಯತೆಯಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆಸ್ಪತ್ರೆಯ ಮುಖ್ಯಸ್ಥ ಡಾ. ಡಿ.ಎಲ್. ಭಟ್ಕಳ ಮಾತನಾಡಿ, ಸಾಧ್ಯವಾದಷ್ಟು ಜನರಿಗೆ ನೆರವಾಗುವ ಕಾರ್ಯವನ್ನು ಮಾಡುತ್ತಿದ್ದೇವೆ. ಆದರೂ ಕೂಡ ನಮ್ಮ ಸಿಬ್ಬಂದಿಯಿಂದ ತೊಂದರೆ ಉಂಟಾಗುತ್ತಿರುವ ಸಣ್ಣ ಪುಟ್ಟ ಉದಾಹರಣೆಗಳಿವೆ. ನೊಂದವರು ನಮ್ಮ ಸಿಬ್ಬಂದಿಯ ವಿರುದ್ಧ ಲಿಖಿತವಾಗಿ ದೂರು ನೀಡಬಹುದು ಎಂದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾವಿಕೇರಿ ಗ್ರಾಪಂ ಸದಸ್ಯ ಉದಯ ವಾಮನ ನಾಯಕ್‌ಮಾತನಾಡಿ, ಕೆ.ಎಲ್.ಇ ಆಸ್ಪತ್ರೆಯ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ಆಸ್ಪತ್ರೆಯಲ್ಲಿರುವ ಕೆಲ ಸಿಬ್ಬಂದಿಯ ನಿರ್ಲಕ್ಷ್ಯತನದಲ್ಲಿ ಆಸ್ಪತ್ರೆಯ ಗೌರವಕ್ಕೆ ಧಕ್ಕೆ ಬರುತ್ತದೆ ಎಂದರು. ಈ ಸಂದರ್ಭದಲ್ಲಿ ಈ ಪ್ರಕರಣವನ್ನು ಪ್ರಭಾಕರ ಕೋರೆಯವರ ಗಮನಕ್ಕೆ ತಂದರು. ತಾಪಂ ಸದಸ್ಯ ಸಂಜೀವ ಕುಚಿನಾಡ, ಭಾವಿಕೇರಿ ಗ್ರಾಪಂ ಉಪಾಧ್ಯಕ್ಷೆ ಶೋಭಾ ಶ್ರೀಧರ ನಾಯ್ಕ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ ಆಚಾರ್ಯ, ಕಾರ್ಯದರ್ಶಿ ಸಂತೋಷ್ ಆಚಾರ್ಯ, ಖಜಾಂಚಿ ಕೃಷ್ಣಾ ವಿರ್ಜಾನಕರ, ವಿಶ್ವಕರ್ಮ ಯುವ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಪ್ರಮುಖರಾದ ರಾಮಕೃಷ್ಣ ನಾಯಕ, ನಾಗೇಶ ಆಚಾರ್ಯ, ದತ್ತಾ ಆಚಾರ್ಯ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು