‘ತಂಬಾಕು ಸೇವನೆ ನಿಯಂತ್ರಣದಲ್ಲಿ ಇಲಾಖೆಗಳ ಪಾತ್ರ ಮುಖ್ಯ’
ದಾವಣಗೆರೆ,ಜು.13: ಯುವಜನತೆ ಹೆಚ್ಚಾಗಿ ತುತ್ತಾಗುತ್ತಿರುವ ತಂಬಾಕು ಸೇವನೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ನಗರ ಪಾಲಿಕೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಮುಖ್ಯ ಪಾತ್ರ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ್ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಪರಿಶೀಲನಾ ಸಭೆೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಂಬಾಕು ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಜಾರಿ ಕುರಿತ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಜಾಗೃತಿ ಮೂಡಿಸಿದಲ್ಲಿ ಅವರು ತಮ್ಮ ಮನೆ-ಮಂದಿಗೆಲ್ಲಾ ಈ ಬಗ್ಗೆ ತಿಳುವಳಿಕೆ ನೀಡುತ್ತಾರೆ. ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳು ಆಗಬೇಕು. ಯಾವುದೇ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಮುಖ್ಯವಾದ ಕಾಯ್ದೆಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಅನುಷ್ಠಾನಗೊಳಿಸಿದಲ್ಲಿ ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸಿದಂತೆ. ಈ ನಿಟ್ಟಿನಲ್ಲಿ ತಂಬಾಕು ನಿಯಂತ್ರಣ ಕಾಯ್ದೆ-2003 ನ್ನು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟವಾಗಿ ತಿಳಿದು ಅನುಷ್ಠಾನಗೊಳಿಸಬೇಕು ಎಂದರು.
ತಾಲೂಕು ಮಟ್ಟದಲ್ಲಿ ತಂಬಾಕು ಅಧಿನಿಯಮದಡಿ ಏನೇನು ಕ್ರಮ ಜರಗಿಸಲಾಗುತ್ತಿದೆ ಎಂದು ವಿಚಾರಿಸಿದ ಅವರು, ಮುಖ್ಯವಾಗಿ ತಾಲೂಕು, ಕ್ಷೇತ್ರ ಮಟ್ಟದ ಅಧಿಕಾರಿಗಳು ಈ ಕಾಯ್ದೆ ಬಗ್ಗೆ ಅರಿತು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯಸ್ತಂಬನ ಸೇರಿದಂತೆ ಹಲವಾರು ಮಾರಣಾಂತಿಕ ಕಾಯಿಲೆಗಳುಂಟಾಗಿ ಸಾವು ಸಂಭವಿಸುತ್ತದೆ. ಈ ಕುರಿತು ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ನಿಷೇಧ ಫಲಕಗಳನ್ನು ಹಾಕುತ್ತಿದ್ದರೂ ಜನರಿಗೆ ಭಯವಿಲ್ಲ. ಮುಂದಿನ ದಿನಗಳಲ್ಲಿ ಇದು ಸಂಪೂರ್ಣ ನಿಷೇಧಗೊಳ್ಳಬೇಕೆಂಬ ಆಶಾಭಾವ ವ್ಯಕ್ತಪಡಿಸಿದರು.
ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ. ರಾಘವನ್ ಮಾತನಾಡಿದರು.
ಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಚಾಲಕ ದುರ್ಗಪ್ಪ ಎಸ್ ಮಾಚನೂರು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್ ಡಿ ವಿಶ್ವನಾಥ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸರೋಜಾ ಬಾಯಿ, ಡಿಡಿಪಿಐ ಎಚ್ ಎಂ ಪ್ರೇಮಾ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಶಿಕ್ಷಣ ಅಧಿಕಾರಿಗಳು, ಸಮಾಜ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರಾದ ಆರ್ ವಿ ಕುಪ್ಪದ, ಸುರೇಶ್‌ಬಾಬು, ಓಂಕಾರಪ್ಪ, ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.