ಯುವಕರ ಕೈಗೆ ಲಾಂಗು, ಮಚ್ಚು ನೀಡುತ್ತೇನೆ: ಅಗ್ನಿ ಶ್ರೀಧರ್
ಬೆಂಗಳೂರು, ಜು.14: ಯುವ ಜನರಿಗೆ ವ್ಯವಸ್ಥೆ ಬದಲಾಯಿಸಲು ತರಬೇತಿ ನೀಡಬೇಕು. ಅದಕ್ಕಾಗಿ ಯುವಜನರ ಸೈನ್ಯ ಕಟ್ಟಿ, ಅವರ ಕೈಗೆ ಲಾಂಗು, ಮಚ್ಚು ನೀಡುತ್ತೇನೆ ಎಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪತ್ರಕರ್ತ ಅಗ್ನಿಶ್ರೀಧರ್, ರಾಜ್ಯದಲ್ಲಿ ನಮ್ಮನ್ನಾಳುತ್ತಿರುವ ಸರಕಾರ ನಾಡಿನ ಜನರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜಾತಿ ಹೆಸರಿನ ಮೇಲೆ ಜನರನ್ನು ಒಡೆಯುವಂತಹ ಕೆಲಸ ಮಾಡುತ್ತಿದ್ದಾರೆ, ಯುವ ಜನರಿಗೆ ವ್ಯವಸ್ಥೆ ಬದಲಾಯಿಸಲು ತರಬೇತಿ ನೀಡಬೇಕು ಎಂದ ಅವರು, ಅದಕ್ಕಾಗಿ ಯುವಜನರ ಸೈನ್ಯ ಕಟ್ಟಿ, ಅವರ ಕೈಗೆ ಲಾಂಗು, ಮಚ್ಚು ನೀಡುತ್ತೇನೆ ಎಂದು ಹೇಳಿದರು.
ಕನ್ನಡ ನಾಡು ಎಂಬುದು ಕೇವಲ ಭೌಗೋಳಿಕ ಕೇಂದ್ರವಾಗಿದೆ. ಆದುದರಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಇತರೆ ಭಾಷಿಕರನ್ನು ನಮ್ಮವರಲ್ಲ ಎಂದು ದೂರುವುದು ಸರಿಯಾದ ಕ್ರಮವಲ್ಲ ಎಂದ ಅವರು, ರಾಜ್ಯದಲ್ಲಿ ಕನ್ನಡಿಗರು, ಕನ್ನಡಿಗರನ್ನೇ ಲೂಟಿ ಮಾಡುತ್ತಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿರುವವರು ನಾಯಕರಾಗಿ ಕೆಲವರು ಮಾತ್ರ ಬೆಳೆಯುತ್ತಿದ್ದು, ಹಲವರು ಹಿಂಬಾಲಕರಾಗಿ ಉಳಿದು ಹೋಗುತ್ತಿದ್ದಾರೆ ಎಂದರು.
ಇಂದೂಧರ ಹೊನ್ನಾಪುರ ಮಾತನಾಡಿ, ನಾಡು-ನುಡಿ ಉಳಿವಿಗಾಗಿ ಸೈದ್ಧಾಂತಿಕವಾಗಿ, ಪ್ರಗತಿಪರ ನಿಲುವುಗಳೊಂದಿಗೆ ಹೋರಾಟಗಳನ್ನು ಮುನ್ನಡೆಸುವವರು ಯಾರು ಇಲ್ಲ. ಆದುದರಿಂದ ಕರುನಾಡ ಸೇನೆ ಸಂಘಟನೆ ಸ್ಥಾಪಿಸಲಾಗಿದ್ದು, ಅದರ ಸಾರಥ್ಯವನ್ನು ಅಗ್ನಿ ಶ್ರೀಧರ್ ವಹಿಸಿಕೊಂಡು ಕಾರ್ಯಕರ್ತರ ಸಮಾವೇಶದಲ್ಲಿ ಮುನ್ನಡೆಸಲಿದ್ದಾರೆ ಎಂದು ತಿಳಿಸಿದರು.
ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಜು.16 ರಂದು ನಗರದ ಪುರಭವನದಲ್ಲಿ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಕರುನಾಡ ಸೇನೆ ಆಯೋಜಿಸಿದೆ.