×
Ad

ಜಾರ್ಜ್ ರಾಜೀನಾಮೆಗೆ ವಿಪಕ್ಷಗಳ ಪಟ್ಟು

Update: 2016-07-14 19:39 IST

ಬೆಂಗಳೂರು, ಜು. 14: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಕ್ಕೆ ಗುರಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ವಿಪಕ್ಷಗಳು ತಮ್ಮ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ವಿಧಾನ ಮಂಡಲ ಉಭಯ ಸದನಗಳಲ್ಲಿ ಧರಣಿ ಸತ್ಯಾಗ್ರಹ ಮುಂದುವರೆದಿದೆ.

 ಗುರುವಾರ ಬೆಳಗ್ಗೆ 11:20ಕ್ಕೆೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರಿಸಿದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂವೇದನೆ ಇಲ್ಲದ ಭಂಡ ಸರಕಾರ ಇದು. ಜಾರ್ಜ್ ಅವರನ್ನು ಸಂಪುಟದಿಂದ ವಜಾಗೊಳಿಸಿ, ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿ ಎಂದು ಆಗ್ರಹಿಸಿದರು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯಂತ ಗಂಭೀರ ಪ್ರಕರಣದ ಚರ್ಚೆ ನಡೆಯುತ್ತಿದ್ದು, ಸಿಬಿಐ ತನಿಖೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದೇವೆ. ಆದರೆ, ರಾಜ್ಯದಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದ ಅವರು, ನನ್ನ ಸಾವಿಗೆ ಜಾರ್ಜ್ ಅವರೇ ಕಾರಣ ಎಂದು ಗಣಪತಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೋರಿದರು.

‘ಅಯ್ಯಯೋ..ಅಯ್ಯಯೋ..ಅನ್ಯಾಯ.. ಅನ್ಯಾಯ.., ಗೋವಿಂದಾ..ಗೋವಿಂದಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಿಂದ ಗೋವಿಂದಾ..ರಾಜ್ಯ ಸರಕಾರ ಗೋವಿಂದ ಗೋವಿಂದಾ.., ತೊಲಗಲಿ ತೊಲಗಲಿ ಜಾರ್ಜ್ ತೊಲಗಲಿ’ ಎಂಬ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಶಾಸಕರ ಕೊರತೆ ಎದ್ದು ಕಾಣುತ್ತಿತ್ತು. ಸಚಿವರ ಸಾಲಿನಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಮಾತ್ರ ಹಾಜರಿದ್ದರು.

ಸ್ಪೀಕರ್ ಕೆ.ಬಿ.ಕೋಳಿವಾಡ, ಧರಣಿ ಕೈಬಿಡಲು ವಿಪಕ್ಷಗಳಿಗೆ ಮನವಿ ಮಾಡಿದರೂ, ಜಾರ್ಜ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ರಾಜ್ಯ ಸರಕಾರ ಹಾಗೂ ಸಚಿವ ಜಾರ್ಜ್ ವಿರುದ್ಧ ಧಿಕ್ಕಾರದ ಘೊಷಣೆ ಮೂಲಕ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕೋಳಿವಾಡ 15 ನಿಮಿಷಗಳ ಕಲಾಪ ಮುಂದೂಡಿದರು.

ಮಧ್ಯಾಹ್ನ 12.45ರ ಸುಮಾರಿಗೆ ಕಲಾಪ ಪುನಃ ಸಮಾವೇಶಗೊಂಡ ಕೂಡಲೇ ವಿಪಕ್ಷ ಸದಸ್ಯರು ತಮ್ಮ ಧರಣಿ ಮುಂದುವರಿಸಿ, ಸಚಿವ ಜಾರ್ಜ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಗದ್ದಲ-ಗೊಂದಲ ಸೃಷ್ಟಿಸಿದರು. ಈ ಮಧ್ಯೆಯೇ ನಾಲ್ಕು ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಯಿತು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಏರು ಧ್ವನಿಯಲ್ಲಿ ಘೋಷಣೆ ಕೂಗುತ್ತಿದ್ದ ಹಿನ್ನೆಲೆಯಲ್ಲಿ ಕಲಾಪದಲ್ಲಿ ಗೊಂದಲ ಸೃಷ್ಟಿಯಾಯಿತು. ಈ ಮಧ್ಯೆಯೇ ಬಿಜೆಪಿ ಸದಸ್ಯರಾದ ಆರ್.ಅಶೋಕ್, ಸುನಿಲ್ ಕುಮಾರ್, ಸತೀಶ್ ರೆಡ್ಡಿ, ಪ್ರಭು ಚವ್ಹಾಣ್ ಅವರು ಕಲಾಪದ ಕಾಗದ ಪತ್ರಗಳನ್ನು ಹರಿದು ಗಾಳಿಗೆ ತೂರಿದರು.

ಮಸೂದೆ ಮಂಡನೆ ಬಳಿಕ ಸ್ಪೀಕರ್ ಕೆ.ಬಿ.ಕೋಳಿವಾಡ, ಸುಗಮ ಕಲಾಪಕ್ಕೆ ಎಲ್ಲ ಪಕ್ಷಗಳ ನಾಯಕರ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸೋಣ ಎಂದು ಸಭೆಗೆ ನಾಯಕರನ್ನು ಆಹ್ವಾನಿಸಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News