ತುಮಕೂರಿನಲ್ಲಿ ಚರ್ಚ್ ದಾಳಿ : ಶಿರಾಗೇಟ್‌ನ ಟ್ಯಾಮ್ಲಿನ್‌ಸನ್ ಚರ್ಚ್‌ಗೆ ಪೆಟ್ರೋಲ್ ಬಾಂಬ್ ದಾಳಿ
ತುಮಕೂರು, ಜು.14: ನಗರದ ಶಿರಾಗೇಟ್‌ನ ಯೂನಿಯನ್ ಕ್ರಿಶ್ಚಿಯನ್ ಕಾಲೇಜು ಆವರಣದಲ್ಲಿರುವ ಸುಮಾರು 86 ವರ್ಷ ಹಳೆಯದಾದ ಟಾಮ್ಲಿನ್ ಸನ್ ಚರ್ಚ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಬಳಸಿ ಹಾನಿ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಸಂಸದ ಎಸ್.ಪಿ.ಮುದ್ದಹನಮೇಗೌಡ, ತುಮಕೂರು ನಗರ ಶಾಸಕ ಡಾ.ರಫೀಕ್ ಅಹ್ಮದ್, ಮಾಜಿ ಸಚಿವ ಸೊಗಡು ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿಯೇ ಬರುವ ಯೂನಿಯನ್ ಕ್ರಿಶ್ಚಿಯನ್ ಕಾಲೇಜು ಸುಮಾರು 100 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಕಾಲೇಜಿನ ಆವರಣದಲ್ಲಿ ಚೋಳ ಮತ್ತು ಹೊಯ್ಸಳ ವಾಸ್ತುಶಿಲ್ಪ ಶೈಲಿಯ ಟ್ಯಾಮ್ಲಿನ್‌ಸನ್ ದೇವಾಲಯ ಸುಮಾರು 86 ವರ್ಷಗಳ ಹಿಂದೆ ನಿರ್ಮಾಣವಾಗಿದೆ.
ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ಬಾಂಬ್ ತಯಾರಿಸಿ ಚರ್ಚಿನ ಬಾಗಿಲಿಗೆ ಎಸೆದಿದ್ದು, ಇದರಿಂದ ಚರ್ಚಿನ ಬಾಗಿಲು ಮತ್ತು ಗೋಡೆಗೆ ಕೊಂಚ ಹಾನಿಯಾಗಿದೆ. ಚರ್ಚಿನ ಬಾಗಿಲಿನ ಬಳಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚರ್ಚಿನ ವಾಚ್‌ಮನ್ ತಕ್ಷಣವೇ ಕೊಳವೆಬಾವಿ ಮೋಟಾರ್ ಆನ್ ಮಾಡಿ ಪೈಪ್ ಮೂಲಕ ನೀರು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯನ್ನು ತಡೆದಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪೆಟ್ರೋಲ್ ಬಾಂಬ್ ಮೂಲಕ ಚರ್ಚ್‌ಗೆ ಹಾನಿ ಮಾಡಲು ಯತ್ನಿಸಿರುವುದು ಖಂಡನೀಯ. ಇಂತಹ ಘಟನೆ ನಡೆಯಬಾರದು. ಜಿಲ್ಲಾಡಳಿತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಪೊಲೀಸರು ಚರ್ಚಿನಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಈ ವಿಚಾರದಲ್ಲಿ ಯಾವುದೇ ಪ್ರಚೋಧನೆಗೆ ಒಳಗಾಗದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮಾತನಾಡಿ, ನಗರದಲ್ಲಿ ಶಾಂತಿ ಕದಡಲು ಕೆಲವು ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯಿದೆ. ಚರ್ಚಿನ ಕಾರ್ಯದರ್ಶಿ ಭೂಷಣ್ ನೀಡಿದ ದೂರಿನ ಅನ್ವಯ ಈಗಾಗಲೇ ಕೇಸು ದಾಖಲಿಸಿ, ಕೃತ್ಯ ಎಸಗಿದವರನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲಿದ್ದೇವೆ. ಕ್ರೈಸ್ತ ಬಾಂಧವರು ಮತ್ತು ನಾಗರಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕೆಂದು ಕೋರಿದರು.
ಶಾಸಕ ಡಾ.ರಫೀಕ್ ಅಹ್ಮದ್ ಮಾತನಾಡಿ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿರುವುದು ಖಂಡನೀಯ. ಇಂತಹ ಪ್ರಕರಣ ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸರು ಎಚ್ಚರವಹಿಸಲಿದ್ದಾರೆ. ಈ ವಿಚಾರವಾಗಿ ಸದನದಲ್ಲಿ ಪ್ರಸ್ತಾಪಿಸುವುದಲ್ಲದೆ, ಗೃಹ ಸಚಿವರ ಗಮನಕ್ಕೂ ತರಲಾಗುವುದು. ಸಮಾಜದಲ್ಲಿ ನಲೆಸಿರುವ ಧಾರ್ಮಿಕ ಶಾಂತಿಯನ್ನು ಕದಡುವ ನಿಟ್ಟಿನಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಖಂಡನೀಯ.
ಕೂಡಲೇ ಕಾರ್ಯ ಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ತುಮಕೂರು ನಗರದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲಾಗುವುದು. ಯಾರು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಕೋರಿಕೆಯಂತೆ ಈ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಘಟನೆಯನ್ನು ಖಂಡಿಸಿದ್ದು, ಜಿಲ್ಲಾ ಪೊಲೀಸರು ಕ್ರಿಯಾಶೀಲವಾಗಿ ಕೆಲಸ ಮಾಡಿ ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಬೇಕು ಎಂದ ಅವರು, ಈ ವಿಚಾರವನ್ನು ನಮ್ಮ ಜಿಲ್ಲೆಯವರೇ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ತಿಳಿಸಲಾಗುವುದು. ಕ್ರಿಶ್ಚಿಯನ್ ಬಂಧುಗಳು ಉದ್ವೇಗಕ್ಕೆ ಒಳಗಾಗದೆ ಶಾಂತಿ ಕಾಪಾಡಬೇಕು. ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಎಸ್.ಶಿವಣ್ಣ ಮಾತನಾಡಿ, ನಗರದಲ್ಲಿ ಕಳೆದ 20 ವರ್ಷಗಳಿಂದ ಇಂತಹ ಘಟನೆ ನಡೆದಿರಲಿಲ್ಲ.ಇಂದಿನ ಘಟನೆ ದುರದೃಷ್ಟಕರ.ಯಾರೋ ಕಿಡಿಗೇಡಿಗಳು ಶಾಂತಿ ಕದಡಲು ಈ ಕೆಲಸ ಮಾಡಿದ್ದಾರೆ.ಉನ್ನತ ಮಟ್ಟದ ತನಿಖೆಯಾಗಬೇಕು.ಈ ಹಿಂದೆಯೂ ಹಲವು ಬಾರಿ ಅಂಜುಮಾನ್ ಸಂಸ್ಥೆಯಂತಹ ಭಯೋತ್ಪಾದನಾ ಸಂಘಟನೆಗಳು ಈ ಕೆಲಸ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿ ಸಮಾಜದಲ್ಲಿ ಶಾಂತಿ ನೆಲಸುವಂತೆ ಮಾಡಬೇಕೆಂದು ಒತ್ತಾಯಿಸಿದರು. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಹಿರಿಯ ಮುಖಂಡ ಜಾನ್ ಸುರೇಶ್‌ಬಾಬು ಮಾತನಾಡಿ, ದೇಶದಲ್ಲಿ ವಿಭಿನ್ನ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿರುವ ಚರ್ಚ್‌ಗಳಲ್ಲಿ ಇದು ಒಂದಾಗಿದೆ. ಹತ್ತಾರು ವರ್ಷಗಳಿಂದ ಇಲ್ಲಿ ಉತ್ತಮ ರೀತಿಯಲ್ಲಿ ಪ್ರಾರ್ಥನೆ ನಡೆಸಿಕೊಂಡು ಬರಲಾಗುತ್ತಿದೆ.ಆದರೆ ಗುರುವಾರ ಬೆಳಗಿನ ಜಾವ ನಡೆದಿರುವ ಘಟನೆ ಖಂಡನೀಯ.ಜಿಲ್ಲಾಡಳಿತ ಮುಂದಿನ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಕೇಂದ್ರ ವಲಯ ಐಜಿಪಿ ಸಿಮಂತಕುಮಾರ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪ್ರಕರಣ ನಡೆಯಬಾರದಿತ್ತು. ಯಾವುದೇ ಕಾರಣಕ್ಕೂ ಶಾಂತಿ ಭಂಗ ಆಗಲು ಬಿಡುವುದಿಲ್ಲ. ಈಗಾಗಲೇ ಜಿಲ್ಲಾ ಪೊಲೀಸರಿಗೆ ತನಿಖೆ ಚುರುಕುಗೊಳಿಸಲು ಎಲ್ಲಾ ರೀತಿಯ ಸಲಹೆ, ಸೂಚನೆಗಳನ್ನು ನೀಡಲಾಗಿದೆ. ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿದ್ದು, ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.ತನಿಖೆಯ ಮುಕ್ತಾಯಗೊಳ್ಳದೆ ಅಂತಿಮವಾಗಿ ಏನು ಹೇಳಲು ಬರುವುದಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಘಟನೆಯಿಂದ ಕೆಲ ಕಾಲ ಆ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆ ಭಾಗದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.