ಜನತೆಯ ಸೇವೆಗೆ ಸಿದ್ಧ: ಶ್ರೀನಿವಾಸಪುರ ಪುರಸಭಾಧ್ಯಕ್ಷ ಇಫ್ತಿಕಾರ್ ಅಹ್ಮದ್
ಶ್ರೀನಿವಾಸಪುರ, ಜು.14: ಪಟ್ಟಣದ ಜನತೆಯ ಸೇವೆಗೆ ಸದಾ ಸಿದ್ಧನಾಗಿರುತ್ತೇನೆ. ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಪುರಸಭಾ ಕಚೇರಿಗೆ ಬಂದು ನನಗೆ ಮೌಖಿಕವಾಗಿ ತಿಳಿಸಿ, ತಕ್ಷಣವೇ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆಂದು ಪುರಸಭಾ ಅಧ್ಯಕ್ಷ ಇಪ್ತಿಕಾರ್ ಅಹ್ಮದ್ ತಜಮುಲ್ ಭರವಸೆ ನೀಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸಪುರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಇತ್ತೀಚೆಗೆ ಕೆಲವು ಪಂಪು ಮೋಟಾರ್ ರಿಪೇರಿಯಾಗಿರುವ ಕಾರಣ ತಕ್ಷಣವೇ ಆಯಾ ವಾರ್ಡ್‌ಗಳಿಗೆ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹಾಳಾಗಿರುವ ಪಂಪನ್ನು ಬದಲಾಯಿಸಿ ಶೀಘ್ರವಾಗಿ ಹೊಸ ಪಂಪುಗಳನ್ನು ಅಳವಡಿಸುತ್ತೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಯಾವುದೇ ರೀತಿಯ ಕುಡಿಯು ನೀರಿನ ಅಭಾವ ಉಂಟಾಗುವುದಿಲ್ಲ. ಪಟ್ಟಣದ 23 ವಾರ್ಡ್‌ಗಳಲ್ಲಿ ಹಲವು ಕಡೆ ಬೀದಿ ದೀಪಗಳು ರಿಪೇರಿಯಾಗಿದ್ದು, ಶೀಘ್ರದಲ್ಲಿಯೇ ಎಲ್ಲಾ ದೀಪಗಳನ್ನು ಹೊಸದಾಗಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಚರಂಡಿಗಳು ಸೇರಿದಂತೆ ಎಲ್ಲಾ ವಾರ್ಡ್‌ಗಳಲ್ಲಿಯೂ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ. ಬ್ಲೀಚಿಂಗ್ ಪೌಡರ್ ಮತ್ತು ಪೆನಾಯಿಲ್ ಯಾವುದೇ ವಾರ್ಡ್‌ಗಳಲ್ಲಿ ಸಿಂಪಡಿಸದೇ ಇದ್ದರೆ ತಕ್ಷಣವೇ ನನ್ನ ಗಮನಕ್ಕೆ ತಂದರೆ ತ್ವರಿತಗತಿಯಲ್ಲಿ ಸಿಂಪಡಣೆ ಮಾಡಿಸಿ ಜನರಿಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳುತ್ತೇನೆ. ಪಟ್ಟಣದ ಎಲ್ಲಾ ವಾರ್ಡ್‌ನ ಜನರು ಸ್ವಚ್ಛತೆಯನ್ನು ತಮ್ಮ ವ್ಯಾಪ್ತಿಯಲ್ಲಿ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ತಮ್ಮ ವ್ಯಾಪ್ತಿಗೆ ಮೀರಿದ ಕಸ ಸಂಗ್ರಹಣೆ ಕಂಡುಬಂದಲ್ಲಿ ನನ್ನ ಗಮಕ್ಕೆ ತಂದರೆ ಶೀಘ್ರವಾಗಿ ತೆರವುಗೊಳಿಸಲು ನಮ್ಮ ಪುರಸಭಾ ಸಿಬ್ಬಂದಿಗೆ ತಿಳಿಸಿ ಜನರ ಆರೋಗ್ಯವನ್ನು ಕಾಪಾಡಲು ನಾನು ಸದಾ ಸಿದ್ಧನಿರುತ್ತೇನೆ ಎಂದರು.
ಸಚಿವರು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ಅಭಿವೃದ್ಧಿಯ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಿ ಸಚಿವರೊಂದಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ತಿಳಿಸಿದ್ದಾರೆ.