×
Ad

ವೀರಾಜಪೇಟೆ: ಶಾಂತಿಯುತ ಸ್ವಯಂ ಪ್ರೇರಣೆಯ ಬಂದ್

Update: 2016-07-14 22:24 IST

ವೀರಾಜಪೇಟೆ, ಜು.14: ಡಿವೈಎಸ್ಪಿ ಮಾದಪಂಡ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ರೂವಾರಿ ಮಾಜಿ ಗೃಹಮಂತ್ರಿ ಕೆ.ಜೆ ಜಾರ್ಜ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೂವರು ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಾಗಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಕೊಡಗು ಬಂದ್‌ಗೆ ವೀರಾಜಪೇಟೆಯಲ್ಲಿ ಶಾಂತಿಯುತವಾಗಿ ಸಂಪೂರ್ಣ ಸ್ವಯಂಪ್ರೇರಣೆಯ ಬೆಂಬಲ ವ್ಯಕ್ತವಾಯಿತು. ವೀರಾಜಪೇಟೆ ಪಟ್ಟಣದಲ್ಲಿ ಬೆಳಗ್ಗೆ 7 ಗಂಟೆಯಿಂದ ಅಂಗಡಿ ಮುಂಗಟ್ಟು ಮುಚ್ಚಿದ್ದವು. 10ಗಂಟೆ ಸುಮಾರಿಗೆ ಗಡಿಯಾರ ಕಂಬದ ಬಳಿ ಜಮಾಯಿಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು 30 ನಿಮಿಷಗಳ ಕಾಲ ಹೆದ್ದಾರಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ ಸಚಿವ ಜಾರ್ಜ್‌ರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ನಂತರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿತ್ತು. ಅರೆ ಸರಕಾರಿ ಕಚೇರಿಗಳು ಬಾಗಿಲು ಹಾಕಿಕೊಂಡು ಕಾರ್ಯ ನಿರ್ವಹಿಸಿದವು. ರಸ್ತೆಗಳಲ್ಲಿ ಕೆಲವೊಂದು ಖಾಸಗಿ ವಾಹನಗಳನ್ನು ಹೊರತುಪಡಿಸಿದರೆ ಯಾವುದೇ ವಾಹನಗಳು ಸಂಚರಿಸಲಿಲ್ಲ. ಖಾಸಗಿ, ಸಾರಿಗೆ ಸಂಸ್ಥೆ ಬಸ್‌ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಿತ್ತಿರುವ ಸಪ್ಲಿಮೆಂಟರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಸಮುಚ್ಚಯ ನ್ಯಾಯಾಲಯ ತೆರೆದಿದ್ದರೂ ಕಕ್ಷಿಗಾರರು ಗೈರು ಹಾಗೂ ವಕೀಲರ ಸಂಖ್ಯೆ ಕೊರತೆಯಿಂದ ನ್ಯಾಯಾಲಯದ ಕಾರ್ಯಕಲಾಪಗಳು ಸ್ಥಗಿತಗೊಂಡಿದ್ದವು. ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ರೋಗಿಗಳ ಸಂಖ್ಯೆ ವಿರಳವಾಗಿತ್ತು. ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಪ್ರತಿಭಟನೆಯಲ್ಲಿ ಹಲವಾರು ಸಂಘಟನೆಗಳ ನಾಯಕರು, 300ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನೆಯ ಬಂದೋಬಸ್ತನ್ನು ಡಿವೈಎಸ್ಪಿ ನಾಗಪ್ಪವಹಿಸಿದ್ದರು. ವೃತ್ತ ನಿರೀಕ್ಷಕ ಶಾಂತಮಲ್ಲಪ್ಪ, ನಗರ ಠಾಣಾಧಿಕಾರಿ ಸುಬ್ರಹ್ಮಣ್ಯ, ಈ ಹಿಂದೆ ವೀರಾಜಪೇಟೆಯಲ್ಲಿ ಸೇವೆ ಸಲ್ಲಿಸಿದ್ದ ವೃತ್ತ ನಿರೀಕ್ಷಕ ಪ್ರಸಾದ್, ಸಬ್ ಇನ್‌ಸ್ಪೆೆಕ್ಟರ್ ಬೋಪಣ್ಣ, ಮೋಹನ್ ಅವರನ್ನು ಕರೆಸಲಾಗಿತ್ತು. 5 ಕೆಎಸ್‌ಆರ್‌ಪಿ ತುಕಡಿ, 2 ಡಿಎಆರ್ ತುಕಡಿ, 1 ರ್ಯಾಪಿಡ್ ಆಕ್ಷನ್ ಫೋರ್ಸ್ ಸೇರಿದಂತೆ 250 ಪೋಲಿಸರು ವೀರಾಜಪೇಟೆ ನಗರ ವ್ಯಾಪ್ತಿಯಲ್ಲಿ ಪಾಲ್ಗೊಂಡಿದ್ದರು.

ವೀರಾಜಪೇಟೆಯಲ್ಲಿ ಬಂದೋಬಸ್ತ್‌ಗಾಗಿ ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಕಡೆಗಳಿಂದ ಪೊಲೀಸರನ್ನು ಕರೆಸಲಾಗಿತ್ತು. ಬೆಳಗ್ಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಸಿಂಗ್, ಐ.ಜಿ ಬಿ.ಕೆ.ಸಿಂಗ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಕರೆ, ಜಿಲ್ಲೆಯ ಉಪ ಆಯುಕ್ತ ನಂಜುಂಡಸ್ವಾಮಿ ಭೇಟಿ ನೀಡಿ ಪೊಲೀಸ್ ಬಂದೋಬಸ್ತ್‌ನ್ನು ಖುದ್ದು ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News