×
Ad

ಆರ್‌ಟಿಐ ಕಾರ್ಯಕರ್ತನಿಗೆ ಬೆದರಿಕೆ: ರಕ್ಷಣೆಗೆ ಆಗ್ರಹಿಸಿ ಮನವಿ

Update: 2016-07-14 22:25 IST

ಶಿವಮೊಗ್ಗ, ಜು. 14: ಭ್ರಷ್ಟಾಚಾರದ ಮಾಹಿತಿ ಸಂಗ್ರಹಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಸಂರಕ್ಷಣಾ ವೇದಿಕೆಯು ಗುರುವಾರ ನಗರದ ಡಿ.ಸಿ. ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿತು. ಶಿವಮೊಗ್ಗ ತಾಲೂಕು ಕುಂಸಿ ಹೋಬಳಿ ಚಾಮೇನಹಳ್ಳಿ ಗ್ರಾಮದ ಗಣೇಶಪ್ಪ ಎಂಬವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ. ಇತ್ತೀಚೆಗೆ ಇವರು ಆರ್‌ಟಿಐ ಕಾಯ್ದೆಯಡಿ ಕಟ್ಟಡ ಕಾರ್ಮಿಕರ ನೋಂದಣಿ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇದರಲ್ಲಿ ಕೋಟ್ಯಂತರ ರೂ. ಅವ್ಯವಹಾರದ ದಾಖಲಾತಿ ಸಂಗ್ರಹಿಸಿದ್ದರು. ಈ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಕೂಡ ನೀಡಿದ್ದರು. ಆದರೆ ಕಾರ್ಮಿಕ ಇಲಾಖೆ ಕೆಲ ಅಧಿಕಾರಿಗಳು, ಮಧ್ಯವರ್ತಿಗಳ ಪ್ರಚೋದನೆಯಿಂದ ಅವರದೇ ಗ್ರಾಮದ ಕೆಲ ವ್ಯಕ್ತಿಗಳು ಜು. 12 ರಂದು ರಾತ್ರಿ ಗಣೇಶಪ್ಪರವರ ಮನೆಗೆ ಮಾರಕಾಸ್ತ್ರಗಳೊಂದಿಗೆ ಆಗಮಿಸಿದ್ದಾರೆ. ಬಾಗಿಲು ಮುರಿದು ಒಳನುಗ್ಗಲು ಯತ್ನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ವೇಳೆ ಗಣೇಶಪ್ಪರವರು ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ಕ್ಕೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಸಹಾಯಕ್ಕೆ ಬಂದಿಲ್ಲ. ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಸುಪ್ರೀಂಕೋರ್ಟ್, ಹೈಕೋರ್ಟ್‌ಗಳು ಹಲವು ಬಾರಿ ನಿರ್ದೇಶನ ಕೊಟ್ಟಿದ್ದರೂ ಪೊಲೀಸರು ಸಹಾಯಕ್ಕೆ ಬರದಿರುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಕಠಿಣ ಕ್ರಮ ಜರಗಿಸಬೇಕು. ಸೂಕ್ತ ರಕ್ಷಣೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಮನವಿ ಅರ್ಪಿಸುವ ವೇಳೆ ಸಂಘಟನೆಯ ಅಧ್ಯಕ್ಷ ಎಸ್.ಎನ್. ಫಝ್ಲದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News