ಉ.ಕ.: ಆಗಸ್ಟ್ 15ರ ಬಳಿಕ ಪ್ಲಾಸ್ಟಿಕ್ ನಿಷೇಧ ಕಡಾ್ಡಯ
ಾರವಾರ,ಜು.14: ಜಿಲ್ಲೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದು, ಆಗಸ್ಟ್ 15ರ ಬಳಿಕ ಯಾವುದೇ ರೀತಿಯ ಪ್ಲಾಸ್ಟಿಕ್ ಮಾರಾಟ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.
ಅವರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿ ಕುರಿತು ಗುರುವಾರ ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಮತ್ತು ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳಿಂದ ಪರಿಸರಕ್ಕೆ ಅತ್ಯಧಿಕ ಹಾನಿಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚಗಳು, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆಗಳು ಇತ್ಯಾದಿಗಳನ್ನು ಸರಕಾರ ನಿಷೇಧಿಸಿದೆ. ಈ ಕುರಿತು ಈಗಾಗಲೇ ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ಒಂದು ತಿಂಗಳ ಕಾಲ ಈ ಕುರಿತು ಜಿಲ್ಲೆಯ ಎಲ್ಲಾ ಗ್ರಾಮಾಂತರ ಹಾಗೂ ನಗರಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದರು.
ನಗರಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಮಿತಿ ಕಾರ್ಯದರ್ಶಿ ಆಗಿರುವರು. ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಎಲ್ಲಾ ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕುರಿತು ಮುಜರಾಯಿ ಇಲಾಖೆ ಮೂಲಕ ಸೂಚನೆ ನೀಡಬೇಕು. ಪ್ರಥಮ ಹಂತದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಗೂ ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್ ಮೇಲೆ ನಿರ್ಬಂಧ ವಿಧಿಸಬೇಕು. ವ್ಯಾಪಾರಿಗಳಿಗೆ ಈ ಕುರಿತು ತಿಳುವಳಿಕೆ ನೀಡಿ ಅವರಿಂದ ಅಫಿದಾವಿತ್ ಪಡೆದುಕೊಳ್ಳಬಹುದಾಗಿದೆ. ತಿಳುವಳಿಕೆ ನಿರ್ಲಕ್ಷಿಸುವ ವ್ಯಾಪಾರಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಅವರು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಯಾವುದಕ್ಕೆ ವಿನಾಯಿತಿ
: 1. ವಿಶೇಷ ಆರ್ಥಿಕ ವಲಯ (ಎಸ್‌ಸಿಝಡ್) ಮತ್ತು ರಫ್ತು ಉದ್ದೇಶಿತ ಘಟಕಗಳಲ್ಲಿ ಸ್ಥಾಪಿತವಾದ ರಫ್ತು ಮಾಡುವ ಉದ್ದೇಶಕ್ಕಾಗಿ ಉತ್ಪಾದಿಸುವ ಪ್ಲಾಸ್ಟಿಕ್ ವಸ್ತುಗಳಿಗೆ. 2. ಸಾಮಗ್ರಿಗಳನ್ನು ಬಳಸುವುದಕ್ಕೆ ಮೊದಲು ಉತ್ಪಾದನಾ/ಸಂಸ್ಕರಣಾ ಘಟಕಗಳಲ್ಲಿ ಪ್ಯಾಕ್ ಮಾಡಿ ಸೀಲ್ ಮಾಡಲು ಬಳಸುವ ಹಾಗೂ ಸಾಮಗ್ರಿಗಳ ಪ್ಯಾಕೇಜಿಂಗ್ ಮಾಡುವ ಸಂದರ್ಭದಲ್ಲಿ ಅವಿಭಾಜ್ಯವಾಗಿ ಉಪಯೋಗಿಸುವ ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ.
3. ಅರಣ್ಯ ಮತ್ತು ತೋಟಗಾರಿಕಾ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಚೀಲಗಳು ಮತ್ತು ಹಾಳೆಗಳಿಗೆ.
4. ಹಾಲು ಮತ್ತು ಹಾಲು ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್‌ಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.