ಭೌಗೋಳಿಕ ಅರಿವಿದ್ದರೆ ಉತ್ತಮ ಕಾರ್ಯ ನಿರ್ವಹಣೆ ಸಾಧ್ಯ: ಚಂದ್ರಶೇಖರ
ಸೊರಬ, ಜು. 14: ತಾಲೂಕಿನ ಭೌಗೋಳಿಕ ಅರಿವಿದ್ದಾಗ ಮಾತ್ರ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎಂದು ತಾಲೂಕಿನ ನೂತನ ತಹಶೀಲ್ದಾರ್ ಚಂದ್ರಶೇಖರ ಬಿ.ಎಲ್. ನುಡಿದರು. ಬುಧವಾರ ಸಂಜೆ ಸೊರಬ ಪಟ್ಟಣದ ತಾಲೂಕು ಕಚೆೇರಿಯಲ್ಲಿ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡು ಹಾಗೂ ಕಂದಾಯ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಸ್ವಾಗತ ಸ್ವೀಕರಿಸಿ ಮಾತನಾಡಿದರು. ಸಾರ್ವಜನಿಕರ ಸಮಸ್ಯೆಗಳನ್ನು ಅರಿಯಲು ಸ್ಥಳೀಯ ಭೌಗೋಳಿಕ ಅರಿವು ಇದ್ದಾಗ ಮಾತ್ರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ನೆರವಾಗುತ್ತದೆ. ತಾವು ಸಾಗರ ತಾಲೂಕಿನಲ್ಲಿ ಕಾರ್ಯನಿರ್ವಹಿಸಿದ್ದರಿಂದ ತಾಲೂಕಿನ ಹೆಚ್ಚಿನ ಪಾಲು ಭೌಗೋಳಿಕ ಮಾಹಿತಿ ಇದೆ. ಕೆಲವೇ ದಿನಗಳಲ್ಲಿ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
ರೈತರ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ನಾಡ ಕಚೆೇರಿಗಳಲ್ಲಿ ಸಮರ್ಪಕ ಪಹಣಿ ವಿತರಣೆ ಆಗುತ್ತಿಲ್ಲ. ಅಲ್ಲದೇ ಹಲವಾರು ದಾಖಲೆಗಳಿಗೆ ತಾಲೂಕು ಕಚೆೇರಿಗೆ ರೈತರು ಅಲೆದಾಟ ಮಾಡುವಂತಾಗಿದೆ. ಆದ್ದರಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಲಾಗುವುದು. ಹಾಗೂ ಪೋಡಿಮುಕ್ತ ಗ್ರಾಮಗಳನ್ನು ಆಗಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಗ್ರಾಮಲೆಕ್ಕಿಗರ ಸಂಘದ ರಾಜ್ಯಾಧ್ಯಕ್ಷ ಶಿವಪ್ರಸಾದ್ ಮಾತನಾಡಿ, ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ತಹಶೀಲ್ದಾರ್ ಕೆಳಹಂತದಲ್ಲಿ ಕಾರ್ಯನಿರ್ವಹಿಸಿ, ಮೇಲ್ದರ್ಜೆ ಅಧಿಕಾರಿಗಳಾಗಿ ಬಂದಿರುವುದರಿಂದ ಕೆಳಹಂತದ ಅಧಿಕಾರಿಗಳ ಕಷ್ಟಗಳ ಅರಿವು ಇದೆ. ನಮ್ಮ ಎಲ್ಲ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ. ಕಂದಾಯ ಇಲಾಖೆ ನೌಕರರೂ ಕೂಡ ಅಧಿಕಾರಿಗಳೊಂದಿಗೆ ಕೈಜೋಡಿಸಿ, ಉತ್ತಮವಾಗಿ ಕಾರ್ಯನಿರ್ವಹಿಸಿ. ಒಂದು ಅತ್ಯುತ್ತಮ ತಾಲೂಕು ಕಚೆೇರಿಯನ್ನಾಗಿ ಮಾಡುವಂತೆ ಸಹೋದ್ಯೋಗಿಗಳಿಗೆ ಕರೆ ನೀಡಿದರು.
ಉಪತಹಶೀಲ್ದಾರ್‌ಗಳಾದ ನಟರಾಜ, ಅಂಬಾಜಿ, ಗ್ರಾಮ ಲೆಕ್ಕಿಗರ ಸಂಘದ ತಾಲೂಕು ಅಧ್ಯಕ್ಷ ಸುಧೀರ್, ರಾಜಸ್ವ ನಿರೀಕ್ಷಕ ಎಸ್.ಮಹೇಶ್, ಗುರುರಾಜ, ಶ್ರೀನಿವಾಸ, ಸೋಮಶೇಖರ, ಲೋಹಿತ್, ಮತ್ತಿತರರು ಉಪಸ್ಥಿತರಿದ್ದರು.