×
Ad

ಕೊಡಗು ಬಂದ್ ಶಾಂತಿಯುತ

Update: 2016-07-14 22:31 IST

 ಮಡಿಕೇರಿ, ಜು. 14 : ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಸಂಘಪರಿವಾರ ಕರೆ ನೀಡಿದ್ದ ಕೊಡಗು ಬಂದ್ ಶಾಂತಿಯುತವಾಗಿ ನಡೆಯಿತು.

ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸ್ವಯಂಪ್ರೇರಿತ ಬಂದ್‌ಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಖಾಸಗಿ ಬಸ್ ಮಾಲಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಖಾಸಗಿ ಬಸ್‌ಗಳು, ಆಟೊ ರಿಕ್ಷಾಗಳ ಸಂಚಾರ ಸ್ಥಗಿತಗೊಂಡಿತ್ತು, ಕೆಎಸ್ಸಾರ್ಟಿಸಿ ಬಸ್‌ಗಳು ಕೂಡ ಸಂಚರಿಸಲಿಲ್ಲ. ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿಲ್ಲ, ಬಾಗಿಲು ತೆರದಿದ್ದ ಕೆಲವು ಕಚೇರಿಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದ ಘಟನೆಗಳು ನಡೆದವು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಂಘಪರಿವಾರದ ಕಾರ್ಯಕರ್ತರು ಟಯರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ ಪ್ರಮುಖರು ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಉಲ್ಲೇಖಿಸಿರುವಂತೆ ಆರೋಪವನ್ನು ಎದುರಿಸುತ್ತಿರುವ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾ ಕಾರರು ವಿರಾಜಪೇಟೆಯ ಗಡಿಯಾರ ಕಂಬದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರ ಪ್ರತಿಕೃತಿಗಳನ್ನು ದಹಿಸುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಲ್ಲದೆ, ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಮರಗಳನ್ನು ಕಡಿದು ರಸ್ತೆಗೆ ಉರುಳಿಸಿದ ಘಟನೆಯೂ ನಡೆಯಿತು.

ಬಿಗಿ ಬಂದೋಬಸ್ತ್: ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ವಿವಿಧ ವೃತ್ತಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಿರಾಜಪೇಟೆಗೆ ಐಜಿ ಬಿಜಯ್ ಕುಮಾರ್ ಸಿಂಗ್ ಹಾಗೂ ಸೋಮವಾರಪೇಟೆಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶಾರಾಣಿ ಆಗಮಿಸಿ ಶಾಂತಿ ಸುವ್ಯವಸ್ಥೆ ಬಗ್ಗೆ ನಿಗಾ ವಹಿಸಿದರು.

ಹೆಚ್ಚಿನ ಭದ್ರತೆಗೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರೆಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಬಂದ್ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಸೂಕ್ತ ಬಂದೋಬಸ್ತ್ ಕೈಗೊಳ್ಳುವಲ್ಲಿ ಯಶಸ್ವಿಯಾದರು. ಮಡಿಕೇರಿಯಲ್ಲಿ ಹಲವು ವಕೀಲರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು. ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಬಜರಂಗದಳದ ಅಜಿತ್, ಜಿಲ್ಲಾ ಚೇಂಬರ್‌ನ ಪ್ರಧಾನ ಕಾರ್ಯದರ್ಶಿ ಮೊಂತಿ ಗಣೇಶ್, ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಎಎಪಿ ಪಕ್ಷದ ಮಾದೇಟಿರ ತಿಮ್ಮಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ, ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಜಿಪಂ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜೀರ ಅಯ್ಯಪ್ಪ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News