ಸಸ್ಯ ಸಂಕುಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ: ಅಜಯ್ ಕುಮಾರ್
ಸೊರಬ, ಜು.16: ವನಸಿರಿ ಮಲೆನಾಡು ಎಂಬ ಹೆಸರಿನಿಂದ ರಾರಾಜಿಸುತ್ತಿದ್ದ ಮಲೆನಾಡಿನ ಹೆಸರನ್ನು ಹಾಳು ಮಾಡದೆ ಸಸ್ಯ ಸಂಕುಲವನ್ನು ಉಳಿಸಿ ಬೆಳೆಸಿ ಮತ್ತೆ ಮಲೆನಾಡ ಪಟ್ಟವನ್ನು ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಲಯ ಅರಣ್ಯಾಧಿಕಾರಿ ಅಜಯ್ ಕುಮಾರ್ ತಿಳಿಸಿದರು.
ಸೊರಬ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಯುಐ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಇದರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಸರವನ್ನು ಸಂರಕ್ಷಣೆ ಮಾಡಿ ಭೂಮಿಯ ಅಸಮತೋಲನವನ್ನು ಕಾಪಾಡುವ ನೈತಿಕ ಹೊಣೆಗಾರಿಕೆಯನ್ನು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ಕರ್ತವ್ಯವನ್ನು ಇಂದಿನ ವಿದ್ಯಾರ್ಥಿಗಳು ಕೈಗೊಳ್ಳಬೇಕು. ಅರಣ್ಯ ನಾಶದಿಂದ ಬದುಕು ಅಸ್ತವ್ಯಸ್ತಗೊಳ್ಳುತ್ತಿದೆ. ಜನಸಂಖ್ಯೆ ಹಾಗೂ ಆವಶ್ಯಕತೆಗೂ ಮೀರಿ ಬಳಕೆ ವ್ಯಾಮೋಹದಿಂದಾಗಿ ಕಾಡು ನಶಿಸುತ್ತಿದೆ. ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಉತ್ತಮ ಪರಿಸರ ಕಾಪಾಡಲು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳಸಿ ಸಸ್ಯ ಸಂಕುಲವನ್ನು ಉಳಿಸುವುದರೊಂದಿಗೆ ಮಾನವ ಸಂಕುಲವನ್ನು ಉಳಿಸಿ ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಮುಹಮ್ಮದ್ ಅಲಿ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ಸಂತೋಷ ಕೊಡಕಣಿ, ಗ್ರಾಮ ಸಮಿತಿ ಸದಸ್ಯ ಕಿರಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಟಿ. ಸತ್ಯನಾರಾಯಣ, ಆನವಟ್ಟಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್, ರಘು, ಗಿರೀಶ್, ಉಪನ್ಯಾಸಕ ಶ್ಯಾಮ್‌ಸುಂದರ್, ರಾಜಪ್ಪ, ರವೀಂದ್ರಭಟ್, ಸಂತೋಷ್ ಕುಮಾರ್, ಚಂದ್ರಪ್ಪ, ಸೀಮಾ ಕೌಸರ್ ಮತ್ತಿತರರು ಉಪಸ್ಥಿತರಿದ್ದರು.