ಕಠಿಣ ಕಾನೂನಿನಿಂದ ಜನಸಂಖ್ಯೆ ನಿಯಂತ್ರಣ ಸಾಧ್ಯ: ಶ್ರೀನಿವಾಸ್

Update: 2016-07-16 17:01 GMT

ವಿಶ್ವ ಜನಸಂಖಾ್ಯ ದಿನಾಚರಣೆ

 ತರೀಕೆರೆ, ಜು.16: ಅಪೌಷ್ಟಿಕತೆಯಿಂದ ಯಾವುದೇ ಮಗು ಮರಣ ಹೊಂದಬಾರದು ಎನ್ನುವ ಕಾರಣದಿಂದ ಹಲವು ಜನಪರ ಯೋಜನೆಗಳನ್ನು ಸರಕಾರ ರೂಪಿಸುತ್ತಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಪೌಷ್ಟಿಕ ಮಕ್ಕಳ ತಪಾಸಣೆ ಶಿಬಿರ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೇ ಅಪೌಷ್ಟಿಕತೆಯಿಂದ ನರಳುತ್ತಿರುವುದು ಕಂಡುಬರುತ್ತಿದೆ. ತಾಲೂಕಿನಲ್ಲಿ ಈ ಸಂಖ್ಯೆ ಅತ್ಯಂತ ಕಡಿಮೆ ಇದೆ. ಅಪೌಷ್ಟಿಕತೆ ಹೊಂದಿರುವ ಮಕ್ಕಳ ಆರೈಕೆಗಾಗಿ ಪ್ರತಿ ವರ್ಷ ಈ ಹಿಂದೆ ನೀಡುತ್ತಿದ್ದ 750 ರೂ.ಅನ್ನು ಇದೀಗ 2,000ರೂ. ಗೆ ಹೆಚ್ಚಿಸಲಾಗಿದೆ. ಈ ಹಣ ದುರುಪಯೋಗವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಜನಸಂಖ್ಯೆ ಅತೀ ಹೆಚ್ಚಾಗಿ ಬೆಳೆಯುತ್ತಿದ್ದು, ಅತ್ಯಂತ ಕಠಿಣ ಕಾನೂನು ಜಾರಿಯಾದರೆ ನಿಯಂತ್ರಣಕ್ಕೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.

ಪುರಸಭಾ ಅಧ್ಯಕ್ಷ ಟಿ.ಈ.ಈರಣ್ಣ ಮಾತನಾಡಿ, ಜನನದ ಪ್ರಮಾಣ ಶೇ.18ರಷ್ಟಿದ್ದು, ಮರಣದ ಪ್ರಮಾಣ ಶೇ.7ರಷ್ಟಿರುವುದು ಜನಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಸರಕಾರ ತಂದಿರುವ ಉಪಯುಕ್ತ ಯೋಜನೆಗಳು ಅರ್ಹರಿಗೆ ತಲುಪಲು ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಸಿಡಿಪಿಒ ಚಂದ್ರಪ್ಪಮಾತನಾಡಿ, ಪ್ರತಿ ತಿಂಗಳು ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ತಾಲೂಕಿನಲ್ಲಿ 44 ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸಲಾಗಿದ್ದು ಅವರ ಮನೆಗೆ ಹಾಲು, ಕೋಳಿ ಮೊಟ್ಟೆ, ಪ್ರೊಟೀನ್ ಪೌಡರ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಮನೆಯಲ್ಲಿಯೇ ಪೌಷ್ಟಿಕತೆ ಇರುವ ಆಹಾರ ತಯಾರಿಸಲು ತಾಯಂದಿರಿಗೆ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಜ್ಞ ವೈದ್ಯರುಗಳಾದ ಡಾ.ಗಿರೀಶ್ ಮತ್ತು ಡಾ. ಸಂಜಯ್ ಮಕ್ಕಳ ತಪಾಸಣೆ ನಡೆಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಸನ್ನಕುಮಾರ್ ಸಣ್ಣಕ್ಕಿ, ರೋಟರಿ ಸಂಸ್ಥೆ ಅಧ್ಯಕ್ಷ ಗೋವರ್ಧನ್, ಪದಾಧಿಕಾರಿಗಳಾದ ಕುಮಾರಪ್ಪ, ಅಶೋಕ್, ಇನ್ನರ್‌ವೀಲ್ ಅಧ್ಯಕ್ಷೆ ಮಂಜುಳಾ ಶರತ್, ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ವಿಜಯಕುಮಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News