ನಿರ್ಬಂಧವಿದ್ದರೂ ಮರಳು ಸಾಗಾಟ: ಡಿಸಿ ಅಸಮಾಧಾನ

Update: 2016-07-16 17:02 GMT

 ಮಡಿಕೇರಿ, ಜು.16: ಜಿಲ್ಲೆಯಲ್ಲಿ ಜೂ.10ರಿಂದ ಮರಳು ಸಾಗಾಣೆೆಯನ್ನು ಸ್ಥಗಿತಗೊಳಿಸಲಾಗಿದೆಯಾದರೂ ಅಕ್ರಮವಾಗಿ ಮರಳು ಮತ್ತು ಮರ ಸಾಗಾಣೆ ಬಗ್ಗೆ ವರದಿಗಳು ಕೇಳಿ ಬರುತ್ತಿದೆ. ಈ ಬಗ್ಗೆ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ, ಪ್ರಾದೇಶಿಕ ಸಾರಿಗೆ, ಅರಣ್ಯ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕಂದಾಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮಳೆಗಾಲದ ಅವಧಿಯಲ್ಲಿ ಮರಳು ಹಾಗೂ ಮರ ಸಾಗಿಸುವ ಲಾರಿಗಳು ಸಂಚರಿಸುವುದರಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತವೆ. ಇದರಿಂದ ಸಾರಿಗೆ ಸಂಪರ್ಕಕ್ಕೆ ತೊಂದರೆಯಾಗುವುದರ ಜೊತೆಗೆ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಮರಳು ಹಾಗೂ ಮರ ಸಾಗಾಣೆ ವಾಹನಗಳ ನಿಯಂತ್ರಣಕ್ಕೆ ಮುಂದಾಗುವಂತೆ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಕ್ರಮ ಮರಳು ಸಾಗಾಣೆ ಹಾಗೂ ಮರ ಸಾಗಾಣೆ ಲಾರಿಗಳನ್ನು ನಿಯಂತ್ರಣ ಮಾಡಲು ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ, ರಸ್ತೆಗಳ ಉಳಿವು ಹಾಗೂ ನಾಗರಿಕರ ಸುರಕ್ಷತೆ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಸಂಬಂಧ ಆಹಾರ ನಿರೀಕ್ಷಕರ ಸಭೆಯನ್ನು ಕರೆಯುವಂತೆ ಉಪ ವಿಭಾಗಾಧಿಕಾರಿ ಅವರಿಗೆ ಇದೇ ಸಂದರ್ಭ ಸಲಹೆ ನೀಡಿದರು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಪ್ರಗತಿ ಸಂಬಂಧ ತೋಟಗಾರಿಕಾ ಇಲಾಖಾ ಉಪ ನಿರ್ದೇಶಕರಿಂದ ಮಾಹಿತಿ ಪಡೆದರು.

ಪಶುಪಾಲನಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಕಂದಾಯ ಅದಾಲತ್, ಪಿಂಚಣಿ ಅದಾಲತ್, ಸಾಮಾಜಿಕ ಭದ್ರತಾ ಯೋಜನೆಗಳು, ಆರ್‌ಟಿಸಿ ತಿದ್ದುಪಡಿ ಪ್ರಕರಣ ವಿಲೇವಾರಿ, ಕಂದಾಯ ನಿಗದಿ, ಪಡಶಾಲೆ ಯೋಜನೆ, ಆಧಾರ್ ನೋಂದಣಿ ಪ್ರಗತಿ, ಪೋಡಿ ಪ್ರಕರಣ ಮತ್ತಿತರ ಸಂಬಂಧ ಉಪ ವಿಭಾಗಾಧಿಕಾರಿ ಅವರು ಮಾಹಿತಿ ನೀಡಿದರು. ತಹಶೀಲ್ದಾರ್ ಕುಂಞಮ್ಮ, ಮಹದೇವಸ್ವಾಮಿ, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News