ಜನಸಂಖ್ಯೆ ಹೆಚ್ಚಾಗಲು ಬಡತನ ಕಾರಣ: ಬಿ.ಬಿ.ನಿಂಗಯ್ಯ

Update: 2016-07-16 17:04 GMT

 ಮೂಡಿಗೆರೆ, ಜು.16: ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಲು ಬಡತನ, ಅನಕ್ಷರತೆ ಕಾರಣವಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆಂದೋಲನ ಹಮ್ಮಿಕೊಳ್ಳಬೇಕಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದ್ದಾರೆ.

 ಇಲ್ಲಿನ ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿಯಾದವಳು ತನ್ನ ಹಾಗೂ ಕುಟುಂಬದ ಅಜ್ಞಾನದಿಂದ ಪ್ರತೀ ವರ್ಷವೂ ಹೆರಿಗೆಯಾಗುತ್ತಿದ್ದರೆ, ತಾಯಿಯ ಆರೋಗ್ಯದಲ್ಲಿ ಏರುಪೇರಾಗುವುದರ ಜೊತೆಗೆ ಮಗುವಿನ ಆರೈಕೆಯಲ್ಲೂ ತೊಂದರೆ ಅನುಭವಿಸಬೇಕಾದೀತು ಎಂದರು. ವಿಶ್ವದ ಜನಸಂಖ್ಯೆಯಲ್ಲಿ ಶೇ.60ರಷ್ಟು ಯುವ ಜನಾಂಗವಿದೆ. ಯುವ ಜನರು ಮುಂದಿನ ತಮ್ಮ ಬದುಕಿನ ಶೈಲಿಯನ್ನು ಬದಲಾವಣೆ ಮಾಡುವ ಮೂಲಕ ಜನಸಂಖ್ಯೆ ಸ್ಫೋಟವನ್ನು ನಿಯಂತ್ರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಜನಸಂಖ್ಯೆ ಸ್ಫೋಟದಿಂದ ಸರಕಾರಿ ಸೌಲಭ್ಯಗಳು ಜನರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ. ಬಡತನ, ಮೂಢನಂಬಿಕೆ, ಅನಕ್ಷರತೆ ಜನರ ಮೂಲ ಸಮಸ್ಯೆಯಾಗಿದೆ. ದೇಶದಲ್ಲಿ ಹಸಿರು ಕ್ರಾಂತಿ ಹುಟ್ಟುಹಾಕಿದ್ದರೂ ಆಹಾರದ ಕೊರತೆ ಹೆಚ್ಚಾಗಿದೆ. ವಿದೇಶಗಳಿಂದ ಆಹಾರ ಧಾನ್ಯಗಳನ್ನು ಭಾರತಕ್ಕೆ ರಫ್ತ್ತು ಮಾಡುವ ಮೂಲಕ ಹಸಿವನ್ನು ನೀಗಿಸಲಾಗುತ್ತಿದೆ. ಇದರಿಂದ ಹಸಿರು ಕ್ರಾಂತಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು.

ಈ ಸಂಬಂಧ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ತಾಪಂ ಸದಸ್ಯ ರಂಜನ್ ಅಜಿತ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಯೋಗೀಶ್ ಮಾತನಾಡಿದರು. ಎಂಜಿಎಂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುಂದರೇಶ್, ಉಪ ತಹಶೀಲ್ದಾರ್ ಸುರೇಂದ್ರ ಬಂಗೇರ, ಬಂಕೇನಹಳ್ಳಿ ಚಂದ್ರೇಗೌಡ, ಡಿಎಸ್‌ಬಿಜಿ ಕಾಲೇಜು ಪ್ರಿನ್ಸಿಪಾಲ್ ನಟೇಶ್, ಆರೋಗ್ಯ ಇಲಾಖೆ ಸಹಾಯಕ ಜಿ.ಡಿ.ಮೂರ್ತಿ, ಭಾಗ್ಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News