×
Ad

ತೆಂಗು ಬೆಳೆಗಾರರ ಸಂಕಷ್ಟಕ್ಕೆ ಬಾರದ ರಾಷ್ಟ್ರೀಯ ಪಕ್ಷಗಳು: ಶಾಸಕ ದತ್ತ

Update: 2016-07-16 22:36 IST

ಕಡೂರು, ಜು.16: ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಬಾರದಿರುವುದು ಶೋಚನೀಯ ಸಂಗತಿ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.

ಅವರು ಶನಿವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಅಧಿವೇಶನದಲ್ಲಿ ತಾವು ಮತ್ತು ಅರಸೀಕರೆ ಶಾಸಕರು ನಿಯಮ 60ರ ಅಡಿಯಲ್ಲಿ ಕೊಬ್ಬರಿ, ತೆಂಗಿನ ಧಾರಣೆ ಕುಸಿದು ರೈತರು ಕಂಗಾಲಾಗಿರುವ ಬಗ್ಗೆ ಸರಕಾರ ಸ್ಪಂದಿಸಲು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೆವು ಎಂದರು.

ಈ ಬಗ್ಗೆ ಸಭಾಧ್ಯಕ್ಷರು ಉತ್ತರಿಸುತ್ತಾ ಬರುವ ಮಂಗಳವಾರ ಸದನದಲ್ಲಿ ತೆಂಗು ಬೆಳೆಗಾರರ ಸಮಸ್ಯೆ ಕುರಿತು ಇಡೀ ದಿನ ಚರ್ಚೆಗೆ ಅವಕಾಶ ಕಲ್ಪಿಸಿದ್ದರು. ಆದರೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸದನದಲ್ಲಿ ಧರಣಿ, ಪ್ರತಿಭಟನೆ ಮುಂದುವರಿದಿದ್ದರಿಂದ ಅಧಿವೇಶನದಲ್ಲಿ ತೆಂಗು, ಕೊಬ್ಬರಿ ಧಾರಣೆ ಬಗ್ಗೆ ಚರ್ಚೆಗೆ ಅವಕಾಶ ಸಿಕ್ಕಿಲ್ಲ ಎಂದು ಹೇಳಿದರು. ಕ್ಷೇತ್ರಕ್ಕೆ ಕಳೆದ 25 ವರ್ಷಗಳಲ್ಲಿ ಬಂದ ಅನುದಾನಕ್ಕಿಂತ ತಾವು ಕೇವಲ ಮೂರು ವರ್ಷಗಳಲ್ಲಿ ತಂದ ಅನುದಾನ ಹೆಚ್ಚಿನದಾಗಿದ್ದು, ಈ ಬಗ್ಗೆ ಜನತೆ ಮತ್ತು ಮುಖಂಡರು ತುಲನೆ ಮಾಡಲಿ.ಒಮ್ಮೆ ಇಡೀ ಕ್ಷೇತ್ರವನ್ನು ತಿರುಗಾಡಿಕೊಂಡು ಬಂದು ಆರೋಪ ಮಾಡಲಿ ಎಂದರು.

ತಾವು ವಿರೋಧ ಪಕ್ಷದ ಶಾಸಕನಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಹೇಗೆ ಹಣ ತರಬೇಕು ಎಂದು ಗೊತ್ತಿದೆ. ಇದನ್ನು ಯಾರಿಂದಲೂ ಕಲಿಯಬೇಕಾಗಿಲ್ಲ, ತಾಯಿ ಮಗು ಆಸ್ಪತ್ರೆ ವಾಪಸ್‌ಹೋಗಿರಬಹುದು, ಆರೋಗ್ಯ ಸಚಿವ ರಮೇಶ್‌ಕುಮಾರ್ ತಮಗೆ ಪರಮಾಪ್ತರು, ಅವರ ಬಳಿ ಚರ್ಚಿಸಿ ಪುನಃ ತಾಯಿ-ಮಗು ಆಸ್ಪತ್ರೆ ತರುವ ಶಕ್ತಿ ತಮಗಿದೆ ಎಂದು ಟೀಕಾಕಾರರಿಗೆ ಸ್ಪಷ್ಟನೆ ನೀಡಿದರು.

ರಾಜ್ಯ ಹೆದ್ದಾರಿಯಾದ ಬೀರೂರು-ಹೊಸದುರ್ಗ ರಸ್ತೆಯಲ್ಲಿ ತಾಲೂಕಿನ ಗಡಿ ಭಾಗವಾದ ಅಂತರಘಟ್ಟೆ ಬಳಿ ಸುಮಾರು 3 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆ ತರೀಕೆರೆ ಉಪವಿಭಾಗಕ್ಕೆ ಸೇರುವುದರಿಂದ ಅಲ್ಲಿಯ ಶಾಸಕರೊಂದಿಗೆ ಚರ್ಚಿಸಿ, ದುರಸ್ತಿಗೆ ಅನುದಾನ ತಂದಿದ್ದು, ಸದ್ಯದಲ್ಲಿಯೇ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ ಎಂದರು.

ಈ ಸಂದರ್ಭ ಪುರಸಭಾ ಸದಸ್ಯೆ ಜಯಮ್ಮ, ಜೆಡಿಎಸ್ ಮುಖಂಡರಾದ ಕೆ.ಎಸ್. ರಮೇಶ್, ಕೆ.ಎಚ್.ಲಕ್ಕಣ್ಣ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News