×
Ad

ಆಗಸ್ಟ್ 1ರಂದು ಭಟ್ಕಳಕ್ಕೆ ಲೆಫ್‌ಲೆನ್ ಎಕ್ಸ್ ಪ್ರೆಸ್ ರೈಲು: ಡಿಸಿ ನಕುಲ್

Update: 2016-07-16 22:46 IST

ಕಾರವಾರ, ಜು.16: ವಿಶ್ವದಲ್ಲೇ ಪ್ರಥಮ ಎನ್ನಲಾದ ಸಂಚಾರಿ ರೈಲು ಆಸ್ಪತ್ರೆ ‘ಲೈಫ್‌ಲೈನ್ ಎಕ್ಸ್ ಪ್ರೆಸ್’ ಆಗಸ್ಟ್ 1ರಂದು ಭಟ್ಕಳ ರೈಲು ನಿಲ್ದಾಣಕ್ಕೆ ಆಗಮಿಸಲಿದ್ದು, ಆಗಸ್ಟ್ 21ರವರೆಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.

ಲೈಫ್‌ಲೈನ್ ಎಕ್ಸ್‌ಪ್ರೆಸ್ ಆಗಮನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಪ್ರಸಿದ್ಧ ತಜ್ಞ ವೈದ್ಯರ ತಂಡಗಳಿಂದ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗಳು ನಡೆಸಲಿದೆ. ಜಿಲ್ಲೆಯ ಎಲ್ಲಾ ಅರ್ಹ ನಾಗರಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸುಸಜ್ಜಿತ ರೈಲಿನಲ್ಲಿ ಎರಡು ಶಸ್ತ್ರ ಚಿಕಿತ್ಸಾ ಕೊಠಡಿಗಳಲ್ಲಿ ಐದು ಶಸ್ತ್ರ ಚಿಕಿತ್ಸಾ ಘಟಕಗಳನ್ನು ತೆರೆಯಲಾಗುವುದು. ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಆರೋಗ್ಯ ಸೇವೆ ಮಾತ್ರವಲ್ಲದೆ ಊಟ, ಉಪಾಹಾರ ಒದಗಿಸಲಾಗುವುದು. ದಾಖಲಾಗುವ ರೋಗಿಗಳಿಗೆ ಉಚಿತ ಔಷಧ, ವಸತಿ ಸೌಕರ್ಯವನ್ನೂ ಕಲ್ಪಿಸಲಾಗುವುದು. ಇದರ ಸೌಲಭ್ಯವನ್ನು ಪಡೆಯಲು ಬಯಸುವವರು ನಿಗದಿತ ನಮೂನೆಯ ಅರ್ಜಿಯನ್ನು ತುಂಬಬೇಕು. ಈ ಅರ್ಜಿ ನಮೂನೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಿಎಚ್‌ಸಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ ಎಂದರು. ಅತ್ಯಾಧುನಿಕ ಚಿಕಿತ್ಸೆ:

ವಿವಿಧ ರೋಗಗಳ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯನ್ನು ದೇಶದ ಖ್ಯಾತ ವೈದ್ಯರು ನಡೆಸಲಿದ್ದಾರೆ. ಕಿವಿ ರೋಗ, ಮೂರ್ಛೆ ರೋಗ, ದಂತ ಚಿಕಿತ್ಸೆ, ಹರಿದ ಅಥವಾ ಸೀಳು ತುಟಿ, ಸುಟ್ಟ ಗಾಯಗಳಿಗೆ ಶಸ್ತ್ರಚಿಕಿತ್ಸೆ, ಪೋಲಿಯೊ ರೋಗಿಗಳಿಗೆ ಸಲಕರಣೆ, ಕಣ್ಣಿನ ತಪಾಸಣೆ ಕಾರ್ಯಗಳನ್ನು ಈ ಅವಧಿಯಲ್ಲಿ ನಡೆಸಲಾಗುವುದು. ಪ್ರತಿಯೊಂದು ಚಿಕಿತ್ಸೆಗಳಿಗೆ ದಿನಾಂಕ ನಿಗದಿಪಡಿಸಲಾಗಿದ್ದು, ಸದರಿ ದಿನಾಂಕಗಳಂದು ಸಾರ್ವಜನಿಕರು ಲೈಫ್‌ಲೈನ್‌ಗೆ ಭೇಟಿ ನೀಡಬೇಕಾಗಿದೆ ಎಂದರು. ಶಿಬಿರದಲ್ಲಿ ರೋಗಿಗಳ ಹಲ್ಲುಗಳ ಸ್ವಚ್ಛತೆ, ಭರ್ತಿ, ಕೆಟ್ಟ ಮತ್ತು ಕೊಳೆತ ಹಲ್ಲುಗಳ ಕೀಳುವಿಕೆ ಕ್ಯಾಂಪ್‌ನಲ್ಲಿ ಮಾಡಲಾಗುವುದು. ಮೂರ್ಛೆ ರೋಗಿಗಳ ಪರೀಕ್ಷೆ ನಂತರ ತಜ್ಞರ ಸಲಹೆ, ಅಗತ್ಯ ಔಷಧಗಳನ್ನು ನೀಡಲಾಗುವುದು. ಕಣ್ಣು ತಪಾಸಣೆ ಬಳಿಕ ಅಗತ್ಯವಿರುವವರಿಗೆ ಕ್ಯಾಟರ್ಯಾಕ್ಟ್ ಚಿಕಿತ್ಸೆಯನ್ನು ನಿಗದಿತ ದಿನಾಂಕಗಳಂದು ಬೆಳಗ್ಗೆ 9ರಿಂದ ಸಂಜೆ 5ರ ತನಕ ನಡೆಸಲಾಗುವುದು ಎಂದು ತಿಳಿಸಿದರು.

ಮೂರ್ಛೆ ರೋಗ ಚಿಕಿತ್ಸೆ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ತರಬೇತಿಯನ್ನು ನೀಡಲಾಗುವುದು. ಇದೇ ರೀತಿ ಸುತ್ತಲಿನ ಗ್ರಾಮಗಳ ಶಾಲೆಗಳಲ್ಲಿ ದಂತ ಸುರಕ್ಷೆ ಬಗ್ಗೆ ಉಪನ್ಯಾಸ ಏರ್ಪಡಿಸಲಾಗುವುದು ಎಂದವರು ಮಾಹಿತಿ ನೀಡಿದ ಅವರು, ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಸಭೆಯಲ್ಲಿ ಲೈಫ್‌ಲೈನ್ ಎಕ್ಸ್‌ಪ್ರೆಸ್ ಯೋಜನೆಯ ಯೋಜನಾ ನಿರ್ದೇಶಕ ಡಾ. ವೈಭವ್ ದಾಡ್ಕರ್, ದಾಮೋದರ್ ಇಲಾಖೆಗಳ ಅಧಿಕಾರಿಗಳಿದ್ದರು.

ಚಿಕಿತ್ಸೆ ದಿನಾಂಕ ವಿವರ

ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಈ ಕೆಳಕಂಡ ದಿನ ಗಳಂದು ಪೂರ್ವಭಾವಿ ತಪಾಸಣೆ ಕಾರ್ಯಗಳು ನಡೆಯಲಿದೆ.

=ಆಗಸ್ಟ್ 2ರಿಂದ 4ರವರೆಗೆ ಕಣ್ಣಿನ ತಪಾಸಣೆ ಮತ್ತು ಆ.2ರಿಂದ 9ರವರೆಗೆ ಶಸ್ತ್ರಚಿಕಿತ್ಸೆ.

=

=ಆ.10-11ರಂದು ಸೀಳು ತುಟಿ ಪರಿಶೀಲನೆ ಮತ್ತು ಅ. 11ರಿಂದ 13ರವರೆಗೆ ಶಸ್ತ್ರಚಿಕಿತ್ಸೆ. ಅ.10 ಮತ್ತು 11ರಂದು ಆರ್ಥೊಪೆಡಿಕ್ ತಪಾಸಣೆ ಅ.11ರಿಂದ 13ರವರೆಗೆ ಶಸ್ತ್ರಚಿಕಿತ್ಸೆ.

=

=ಅ.14ರಿಂದ 16ರವರೆಗೆ ಕಿವಿ ತಪಾಸಣೆ ಮತ್ತು ಅ.15ರಿಂದ 21ರವರೆಗೆ ಶಸ್ತ್ರಚಿಕಿತ್ಸೆ. ಅ.8ರಿಂದ 14ರವರೆಗೆ ದಂತ ಚಿಕಿತ್ಸೆ.

=ಅ.19ರಿಂದ 21ರ ವರೆಗೆ ಮೂರ್ಛೆ ರೋಗಕ್ಕೆ ಚಿಕಿತ್ಸೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News