×
Ad

ಭೀಕರ ರಸ್ತೆ ಅಪಘಾತ: ಬೆಂಗಳೂರಿನ ಕಾರ್ಪೋರೇಟರ್ ಸೇರಿ ಮೂವರ ದುರ್ಮರಣ

Update: 2016-07-17 11:18 IST

ಮಂಡ್ಯ, ಜು,17: ಶ್ರೀರಂಗಪಟ್ಟಣ ತಾಲೂಕು ಬೆಂಗಳೂರು-ಮೈಸೂರು ಹೆದ್ದಾರಿಯ ಗೌರಿಪುರ ಗೇಟ್ ಬಳಿ ರವಿವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಕಾರ್ಪೋರೇಟರೊಬ್ಬರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಈ ದುರ್ಘಟನೆಯಲ್ಲಿ ಬೆಂಗಳೂರಿನ ಲಕ್ಕಸಂದ್ರ ವಾರ್ಡ್ ಬಿಜೆಪಿ ಸದಸ್ಯ ಮಹೇಶ್‌ಬಾಬು (40), ಸ್ನೇಹಿತರಾದ ಬನ್ನೇರುಘಟ್ಟದ ಬಾಲಾಜಿ (40) ಹಾಗೂ ಮಾರತ್ತಳ್ಳಿಯ ಮುದಾ ಷರೀಪ್ ಅಹ್ಮದ್ (45) ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿ ಪಕ್ಕದ ತೂರಳ್ಳಿ ಬಡಾವಣೆಯ ಸುರೇಶ್, ಪತ್ನಿ ಭವ್ಯ, ಪುತ್ರರಾದ ಧನುಷ್, ಸುಭಾಷ್, ಸುರೇಶ್ ಕಾರಿನ ಚಾಲಕ ಕುಮಾರ್ ಹಾಗೂ ಮಹೇಶ್‌ಬಾಬು ಗೆಳೆಯ ಜಗದೀಶ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹೇಶ್‌ಬಾಬು ಮತ್ತು ಗೆಳೆಯರು ಶುಕ್ರವಾರ ಮೈಸೂರು ಸುತ್ತಮುತ್ತಲ ಪ್ರವಾಸ ಮುಗಿಸಿಕೊಂಡು ಇಂದು ಬೆಳಗ್ಗಿನ ಜಾವ ಬೆಂಗಳೂರು ಕಡೆಗೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ, ಬೆಂಗಳೂರಿನಿಂದ ನಂಜನಗೂಡಿಗೆ ತೆರಳುತ್ತಿದ್ದ ಸುರೇಶ್ ದಂಪತಿ ಕಾರು ಗೌರಿಪುರ ಬಳಿ ಚಾಲಕನ ನಿಯಂತ್ರಣ ತಪ್ಪಿಡಿವೈಡರ್ ಹಾರಿಕೊಂಡು ಎದುರಿನಿಂದ ಬರುತ್ತಿದ್ದ ಮಹೇಶ್‌ಬಾಬು ಅವರಿದ್ದ ಕಾರಿನ ಮೇಲೆ ಬಿದ್ದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಕಾರು ಮೇಲೆ ಬಿದ್ದ ರಭಸಕ್ಕೆ ಮಹೇಶ್‌ಬಾಬು ಅವರಿದ್ದ ಕಾರು ಜಜ್ಜಿಹೋಗಿದ್ದು, ಮಹೇಶ್‌ಬಾಬು ಮತ್ತಿಬ್ಬರು ಗೆಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗೆಳೆಯ ಜಗದೀಶ್ ಗಾಯಗೊಂಡಿದ್ದು, ಅಪಘಾತಕ್ಕೆ ಕಾರಣವಾದ ಕಾರಿನಲ್ಲಿದ್ದ ಸುರೇಶ್, ಪತ್ನಿ, ಇಬ್ಬರು ಮಕ್ಕಳು ಹಾಗೂ ಚಾಲಕ ಕುಮಾರ್ ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ವಿಶ್ವನಾಥ್ ಹಾಗೂ ಪಿಎಸ್ಸೈ ಮಹೇಶ್ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮವಹಿಸಿದರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News