ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು: ಆರ್.ವಿ.ದೇಶಪಾಂಡೆ
ಭಟ್ಕಳ, ಜು.17: ರಾಜ್ಯ ಸರಕಾರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದ್ದು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಅವರು ರವಿವಾರ ಇಲ್ಲಿನ ಸಂತೆ ಮಾರುಕಟ್ಟೆ ಸಮೀಪ ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾದ 1.30 ಕೋಟಿ ರೂ. ವೆಚ್ಚದ ಸುಸಜ್ಜಿತ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಸಲ್ಲದು. ರಾಜ್ಯ ಸರಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಸರಕಾರ ಅಭಿವೃದ್ದಿ ಪರ ಇದೆ ಎಂಬುದಕ್ಕೆ ರಾಜ್ಯದಲ್ಲಿ ಎಲ್ಲೆಡೆ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳೇ ಸಾಕ್ಷಿಯಾಗಿದೆ. ವಿರೋಧ ಪಕ್ಷದ ಶಾಸಕರೂ ಅಭಿವೃದ್ದಿ ಕೆಲಸಗಳಿಗೆ ತಮ್ಮ ಬಳಿ ಬರುತ್ತಾರೆ. ಅವರಿಗೂ ಸಹ ತಾವು ಪಕ್ಷ ಬೇಧವಿಲ್ಲದೆ ಅಭಿವೃದ್ದಿಗಾಗಿ ಹಣ ಮಂಜೂರು ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಶಾಸಕ ಮಂಕಾಳ ವೈದ್ಯ ಮಾತನಾಡಿ, ಈ ಹಿಂದೆ ಅಭಿವೃದ್ದಿಗಾಗಿ ಬರುತ್ತಿದ್ದ ಹಣ ಮರಳಿ ಸರಕಾರದ ಖಜಾನೆ ಸೇರುತ್ತಿತ್ತು. ಆದರೆ, ಈಗ ಅಂತಹ ಪ್ರಮೇಯವೇ ಇಲ್ಲ. ಪ್ರತಿಯೊಂದು ಯೋಜನೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಎಷ್ಟೇ ಹಣ ಬಿಡುಗಡೆಗೊಂಡರೂ ಸಾಕಾಗುತ್ತಿಲ್ಲ. ಜಿಲ್ಲೆಯಲ್ಲೇ ಇಂತಹ ಮೀನು ಮಾರುಕಟ್ಟೆ ಭಟ್ಕಳದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಇದು ಸರಕಾರದ ಸಾಧನೆಯೂ ಹೌದು ಎಂದ ಅವರು ಭಟ್ಕಳ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಉಸ್ತುವಾರಿ ಸಚಿವರು ಅಭಿವೃದ್ದಿ ಕಾರ್ಯಗಳಿಗೆ ಹಣಕ್ಕೆ ಕೊರತೆ ಮಾಡಿಲ್ಲ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಮಾತನಾಡಿ, ಭಟ್ಕಳದ ಶಿರಾಲಿಯಲ್ಲಿ ಈಗಾಗಲೇ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ಭಟ್ಕಳದಲ್ಲಿ ಆಗುತ್ತಿರುವುದು ಇದು ಎರಡನೆಯದು. ನಮ್ಮ ಪ್ರಾಧಿಕಾರದಿಂದ ಯಾವುದೇ ಅಭಿವೃದ್ದಿ ಕೆಲಸ ಆಗಬೇಕಿದ್ದಲ್ಲಿ ಅದಕ್ಕೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್, ಸದಸ್ಯ ಅಲ್ಬರ್ಟ ಡಿಕೋಸ್ತ, ತಾಲೂಕು ಪಂಚಾಯತ್ ಅಧ್ಯಕ್ಷ ಈಶ್ವರ ನಾಯ್ಕ, ಸಾಂಬಾರು ಮಂಡಳಿ ಅಧ್ಯಕ್ಷ ಮುಝಾಮಿಲ್‌ಖಾಜಿಯಾ, ಗೇರು ನಿಗಮದ ಅಧ್ಯಕ್ಷ ಶಂಭುಗೌಡ, ಪುರಸಭೆ ಅಧ್ಯಕ್ಷೆ ಮಂಜಮ್ಮ ರವೀಂದ್ರ, ಉಪಾಧ್ಯಕ್ಷ ಡಾ.ಸೈಯದ್ ಸಲೀಂ, ಡಾ.ಸಿ.ಎ ಖಲೀಲುರ್ರೆಹ್ಮಾನ್, ರಾಮ ಮೊಗೇರ್, ಉಪವಿಭಾಗಾಧಿಕಾರಿ ಚಿದಾನಂದ ವಠಾರೆ, ತಹಶೀಲ್ದಾರ್ ವಿ.ಎನ್. ಬಾಡಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.