ಅಂಜುಮನ್ ಶಿಕ್ಷಣ ಸಂಸ್ಥೆಯ ಬೆಳವಣಿಗೆಯ ಹಿಂದೆ ಹಿರಿಯರ ತ್ಯಾಗ ಅಡಗಿದೆ: ಆರ್.ವಿ.ದೇಶಪಾಂಡೆ

Update: 2016-07-17 13:49 GMT

ಭಟ್ಕಳ, ಜು.17: ಇಲ್ಲಿನ ಪ್ರತಿಷ್ಠಿತ ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಇದರ ಜುಕಾಕೋ ಶಂಸುದ್ದೀನ್ ಸ್ಮರಣಾರ್ಥ ಆಡಳಿತ ಕಟ್ಟಡ ಹಾಗೂ ಎಸ್.ಎಂ.ಯಾಹ್ಯಾ ಮೆಮೋರಿಯಲ್ ಸ್ನಾತಕೋತ್ತರ ಕಟ್ಟಡದ ಉದ್ಘಾಟನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಅಂಜುಮಾನ್ ಸಂಸ್ಥೆ ಉತ್ತಮವಾಗಿ ಬೆಳೆದು ಬಂದಿದ್ದು, ಇದಕ್ಕೆ ಕಾರಣ ಇದರ ಹಿಂದಿರುವ ವ್ಯಕ್ತಿಗಳು ಮತ್ತು ಶಕ್ತಿಗಳು. ಅವರಲ್ಲಿ ಜುಕಾಕೋ ಶಂಶುದ್ಧೀನ್ ಹಾಗೂ ಎಸ್. ಎಂ.ಯಾಹ್ಯಾ ಕೂಡಾ ಸೇರಿದ್ದಾರೆ. ತಮ್ಮಕುಟುಂಬಕ್ಕೆ ಹತ್ತಿರವಾಗಿದ್ದ ಶಂಶುದ್ದೀನ್ ಅತ್ಯಂತ ಸರಳ ವ್ಯಕ್ತಿತ್ವದ ಉತ್ತಮ ವ್ಯಕ್ತಿಯಾಗಿದ್ದರು ಎಂದರು.

ಪ್ರಪಂಚದಲ್ಲಿ ಉತ್ತಮ ರಾಷ್ಟ್ರವೊಂದಿದ್ದರೆ ಅದು ಭಾರತ ಮಾತ್ರ. ಬೇರೆ ಬೇರೆ ರಾಷ್ಟ್ರಗಳನ್ನು ನೋಡಿದಾಗ ನಮ್ಮಲ್ಲಿರುವ ಸಂಪನ್ಮೂಲ, ಯುವ ಶಕ್ತಿ, ದೇಶಕ್ಕೆ ದೊಡ್ಡ ಆಸ್ತಿಯಾಗಿದೆ. ಉಳಿದ ದೇಶಗಳಲ್ಲಿ ನಾವು ಹೆಚ್ಚು ಹೆಚ್ಚು ಅಶಕ್ತರನ್ನು ಕಂಡರೆ ಭಾರತದಲ್ಲಿ ಶೇ.55ರಷ್ಟು ಯುವ ಶಕ್ತಿಯನ್ನು ನೋಡಬಹುದು. ಯುವಕರಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಟ್ಟು ಅವರು ಉತ್ತಮ ಮಾರ್ಗದರ್ಶನದಲ್ಲಿ ಸಚ್ಚಾರಿತ್ರ್ಯವಂತರಾಗಿ ದೇಶಪ್ರೇಮವನ್ನು ಬೆಳೆಸುವ ಕೆಲಸ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದ ಅವರು, ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಇದ್ದಾರೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಅಲ್ಲಿ ಶೇ.50ರಷ್ಟು ಮಹಿಳೆಯರು ಕೆಲಸ ಮಾಡುತ್ತಿರುತ್ತಾರೆ. ಉತ್ತಮ ವಾತಾವರಣ ಸೃಷ್ಟಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು ಕರ್ನಾಟಕ ಅಭಿವೃದ್ಧಿಯಲ್ಲಿ ಬಹಳ ಮುಂದೆ ಇದೆ ಎಂದೂ ಹೇಳಿದರು.

ಅಧ್ಯಕ್ಷತೆಯನ್ನು ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಜುಕಾಕೊ ಅಬ್ದುರ್ರಹೀಂ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜುಕಾಕೋ ಶಂಶುದ್ಧೀನ್ ಅವರ ಕುರಿತು ಪತ್ರಕರ್ತ ಅಫ್ತಾಬ್ ಹುಸೇನ್ ಕೋಲಾ ಸಂಪಾದಿಸಿ, ತಂಜೀಮ್ ಸಂಸ್ಥೆಯ ವತಿಯಿಂದ ಪ್ರಕಟಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಸಾಂಬಾರು ಮಂಡಳಿಯ ಅಧ್ಯಕ್ಷ ಮುಹಮ್ಮದ್ ಮಝಮ್ಮಿಲ್ ಖಾಜಿಯಾ, ಭಟ್ಕಳಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಹನೀಯರುಗಳ ಕುರಿತು ಅಧ್ಯಯನ ಮಾಡಿ ಪುಸ್ತಗಳನ್ನು ಬಿಡುಗಡೆ ಮಾಡಬೇಕಾಗಿದೆ. ಕಾರ್ಯಕ್ರಮದ ಒತ್ತಡದಿಂದಾಗಿ ಇದೊಂದು ಪುಸ್ತಕವನ್ನು ಹೊರತಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಕುರಿತು ದೊಡ್ಡ ಪುಸ್ತಕವೊಂದನ್ನು ಹೊರತರುವ ಇಚ್ಛೆ ಹೊಂದಿರುವುದಾಗಿ ತಿಳಿಸಿದರು.

ಐರ್ಲೆಂಡ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಸೈಯದ್‌ಖಲೀಲುರ್ರಹ್ಮಾನ್‌ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಸಿಟಿ ಜಾಮಿಯಾ ಮಸೀದಿಯ ಇಮಾಮ್ ವೌಲಾನಾ ಮಸೂದ್ ಇಮ್ರಾನ್, ಜೋಧಪುರದ ಎಂ.ಎಂ.ಇ.ಡಬ್ಲು.ಎಸ್.ನ ಪ್ರಧಾನ ವ್ಯವಸ್ಥಾಪಕ ಮುಹಮ್ಮದ್‌ಅತೀಕ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕ ಮಂಕಾಳ ಎಸ್. ವೈದ್ಯ, ಉತ್ತರಕನ್ನಡ ಜಿಲ್ಲಾಧಿಕಾರಿ ನಕುಲ್ ಮುಂತಾದವರು ಉಪಸ್ಥಿತರಿದ್ದರು.

ಡಾ. ಸೈಯದ್ ಜುಕಾಕೋ ಹಾಗೂ ಜುಕಾಕೋ ಫಜಲ್ ಕ್ರಮವಾಗಿ ಶಂಶುದ್ಧೀನ್ ಜುಕಾಕೋ ಹಾಗೂ ಎಸ್.ಎಂ.ಯಾಹ್ಯಾರ ಕುರಿತು ಮಾತನಾಡಿದರು.

ಎಸ್.ಎಂ.ಅಬ್ದುರ್ರಹ್ಮಾನ್ ಬಾತಿನ್ ಜುಕಾಕೋ ಶಂಶುದ್ಧೀನ್ ಕುರಿತು ಕವನ ವಾಚಿಸಿದರು. ಅಂಜುಮಾನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ಅನ್ಸಾರ್ ಕಾಶಿಮ್‌ಜಿ ಸ್ವಾಗತಿಸಿದರು. ಅಫ್ತಾಬ್ ಹುಸೇನ್ ಕೋಲಾ ನಿರೂಪಿಸಿದರು. ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ಇಸ್ಮಾಯೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News