×
Ad

ರಾಜ್ಯ ಸರಕಾರದ ಮೇಲೆ 1.20 ಲಕ್ಷ ಕೋಟಿ ರೂ.ಸಾಲ

Update: 2016-07-17 20:19 IST

ಬೆಂಗಳೂರು, ಜು.17: ಮಹಾಲೇಖಪಾಲರ ಪೂರ್ವವಾಸ್ತವಿಕ ಲೆಕ್ಕದಂತೆ ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದವರೆಗೆ ರಾಜ್ಯ ಸರಕಾರದ ಮೇಲೆ 1,20,745.25 ಕೋಟಿ ರೂ.ಸಾಲದ ಮೊತ್ತ ಬಾಕಿಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಮಲ್ಲಿಕಾರ್ಜುನ ಖೂಬಾ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ರಾಜ್ಯ ಸರಕಾರವು ಸಾಲ ನೀಡುವ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದಕ್ಕನುಸಾರವಾಗಿ ಬಡ್ಡಿಯನ್ನು ಪಾವತಿಸುತ್ತದೆ ಎಂದಿದ್ದಾರೆ.

ಮಾರುಕಟ್ಟೆ, ಸಣ್ಣ ಉಳಿತಾಯ, ನಬಾರ್ಡ್ ಹಾಗೂ ಎನ್‌ಸಿಡಿಸಿ ಸಾಲಗಳಿಗೆ ವಿವಿಧ ಬಡ್ಡಿ ದರಗಳಿದ್ದು, ಷರತ್ತು ಮತ್ತು ನಿಬಂಧನೆಗಳಿಗನುಸಾರ ಲೆಕ್ಕ ಹಾಕಿ ಪಾವತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮುಕ್ತ ಮಾರುಕಟ್ಟೆ ಸಾಲವನ್ನು ಎತ್ತುತ್ತದೆ ಮತ್ತು ಚಂದಾದಾರರಿಗೆ ನೇರವಾಗಿ ಬಾಂಡ್‌ಗಳನ್ನು ನೀಡುತ್ತದೆ. ಸಣ್ಣ ಉಳಿತಾಯ ನಿಧಿ ಭಾರತ ಸರಕಾರದ ಒಂದು ಯೋಝನೆಯಾಗಿದ್ದು, ಈ ಯೋಜನೆಯ ಮುಖೇನ ರಾಜ್ಯ ಸರಕಾರಕ್ಕೆ ಸಾಲ ನೀಡುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಎರಡೂ ಸಂದರ್ಭಗಳಲ್ಲಿ ರಾಜ್ಯ ಸರಕಾರದ ಯಾವುದೇ ಒಡಂಬಡಿಕೆ ಇರುವುದಿಲ್ಲ. ಪ್ರತಿ ವರ್ಷ ಸಾಲದ ಮರುಪಾವತಿಗೆ ಬೇಕಾಗುವ ಮೊತ್ತವನ್ನು ಪ್ರತಿ ಸಾಲದ ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಲೆಕ್ಕ ಹಾಕಿ ಬಜೆಟ್‌ನಲ್ಲಿ ಪ್ರಧಾನ ಲೆಕ್ಕಶೀರ್ಷಿಕೆ 6003 ಮತ್ತು 6004ರಡಿಯಲ್ಲಿ ಒದಗಿಸಲಾಗುತ್ತದೆ. 2016-17ನೆ ಸಾಲಿನಲ್ಲಿ ಸದರಿ ಲೆಕ್ಕ ಶೀರ್ಷಿಕೆಯಡಿಯಲ್ಲಿ 6841.41 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News