‘ಕನಕದಾಸರ ಮಂದಿರವನ್ನು ಜೀರ್ಣೋದ್ಧಾರ ಮಾಡಲು ನಿರ್ಧಾರ’

Update: 2016-07-17 17:24 GMT

ಕಡೂರು, ಜು.17: ಉಡುಪಿಯ ಕೃಷ್ಣ ಮಠದ ಮುಂಭಾಗದಲ್ಲಿರುವ ಭಕ್ತ ಕನಕದಾಸರ ಮಂದಿರವನ್ನು 1.25 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲು ನಿರ್ಧರಿಸಲಾಗಿದೆ ಎಂದು ಭಕ್ತ ಕನಕದಾಸ ಮಂದಿರ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಓಂ ಶ್ರೀ ಕೃಷ್ಣಮೂರ್ತಿ ತಿಳಿಸಿದರು.

ಅವರು ರವಿವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕನಕದಾಸ ಮಂದಿರದ ಜೀರ್ಣೋದ್ಧಾರ ವಿಚಾರವಾಗಿ ಈಗಾಗಲೇ ಅಷ್ಟ ಮಠಗಳ ಶ್ರೀಗಳ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

 ಈಗಿನ ಪರ್ಯಾಯ ವಹಿಸಿಕೊಂಡಿರುವ ಪೇಜಾವರ ಶ್ರೀಗಳು ಮಂದಿರ ಜೀರ್ಣೋದ್ಧಾರಕ್ಕೆ 25 ಲಕ್ಷ ರೂ. ದೇಣಿಗೆ ನೀಡುವ ಭರವಸೆ ನೀಡಿದ್ದಾರೆ, ಹಿಂದಿನ ಪರ್ಯಾಯ ವಹಿಸಿಕೊಂಡಿದ್ದ ವಿದ್ಯಾವಲ್ಲಭ ತೀರ್ಥ ಪಾದಂ ಶ್ರೀಗಳು ಕೂಡ 5ಲಕ್ಷ ರೂ. ಉಳಿದಂತೆ ಅಷ್ಟ ಮಠಗಳು ದೇಣಿಗೆ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮಂದಿರದಲ್ಲಿ 1965ರಲ್ಲಿಯೆ ಕನಕದಾಸ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಜೀರ್ಣೋದ್ಧಾರ ಸಮಯದಲ್ಲಿ ಈ ಮೂರ್ತಿಗೆ ಯಾವುದೇ ತೊಂದರೆಯಾಗದೆ ಜೀರ್ಣೋದ್ಧಾರ ನಡೆಸಲಾಗುವುದು ಎಂದರು.

ಮಂದಿರ ಜೀರ್ಣೋದ್ಧಾರ ಬಳಿಕ ಉಡುಪಿಯಲ್ಲಿಯೇ ಸುಮಾರು 100 ಎಕರೆ ಪ್ರದೇಶದಲ್ಲಿ ವಿದ್ಯಾರ್ಥಿಗಳ ವಸತಿ ಗೃಹ, ಪ್ರವಾಸಿಗರಿಗೆ ತಂಗುದಾಣ ಮತ್ತು ಕನಕಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಕುರುಬ ಸಮಾಜದ ರಾಜ್ಯ ನಿರ್ದೇಶಕ ಕರಿಬಡ್ಡೆ ಶ್ರೀನಿವಾಸ್ ಮಾತನಾಡಿ, ಕನಕದಾಸರು ಉಡುಪಿಯ ಕನಕನಕಿಂಡಿ ಮೂಲಕ ಭಕ್ತರಿಗೆ ದರ್ಶನ ತೋರಿದ್ದು, ಈ ಮಂದಿರ ಜೀರ್ಣೋದ್ಧಾರಕ್ಕೆ ಸಮಾಜ ಬಂಧುಗಳು ಸಹಕರಿಸುವಂತೆ ಮನವಿ ಮಾಡಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News