ಜನಪದ ಮತ್ತು ಸುಗಮ ಗೀತೆಗಳೊಂದಿಗೆ ವಿನೂತನ ಪ್ರತಿಭಟನೆ

Update: 2016-07-17 17:25 GMT

ಕುಶಾಲನಗರ, ಜು. 17: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣರವರ ನೇತೃತ್ವದಲ್ಲಿ ಪಟ್ಟಣದ ಕಾವೇರಿ ವೃತ್ತದ ಬಳಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ತಬಲ ಬಡಿಯುತ್ತಾ, ಜನಪದ ಮತ್ತು ಸುಗಮ ಗೀತೆಗಳೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಎಂ. ಕೃಷ್ಣರವರು ಎಂ.ಕೆ ಗಣಪತಿರವರು ಆತ್ಮಹತ್ಯೆ ಮಾಡಿಕೊಂಡು ಹದಿನೈದು ದಿನಗಳು ಕಳೆದರು ಕುಟುಂಬಕ್ಕೆ ಇನ್ನೂ ಸಹ ನ್ಯಾಯ ಸಿಗದಿರುವುದು ಖಂಡನೀಯ. ರಾಜ್ಯದಲ್ಲಿ ಇಷ್ಟೆಲ್ಲಾ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರಕಾರ ಮಾತ್ರ ಮೌನವಹಿಸಿ ಅರೋಪಿಗಳಿಗೆ ರಕ್ಷಣೆ ನೀಡುತ್ತಿದೆ. ಆದ್ದರಿಂದ ಈ ಪ್ರಕರಣದ ಸತ್ಯಾಂಶಗಳು ಹೊರಬರಬೇಕಾದರೆ ಸಿಐಡಿ ಯಿಂದ ಸಿಬಿಐಗೆ ಪ್ರಕರಣ ವಹಿಸುವುದು ಸೂಕ್ತ ಎಂದು ಹೇಳಿದರು.

 ರಾಜ್ಯದಲ್ಲಿ ಯಾವುದೇ ಸರಕಾರಿ ಇಲಾಖೆಗಳಲ್ಲಿ ರಾಜಕಾರಣಿಗಳ ಹಸ್ತಾಕ್ಷೇಪ ಇಲ್ಲದೇ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಹಾಗೂ ಸರಕಾರದ ಮೇಲಧಿಕಾರಿಗಳು ಕೆಳವರ್ಗದ ನೌಕರರಿಗೆ ಕೇವಲ ಮಾರ್ಗದರ್ಶನ ನೀಡಬೇಕೇ ಹೊರತು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡದಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ವಿಜಯ್‌ಕುಮಾರ್ ಮತ್ತು ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಅರುಣ್ ಪೂಜಾರಿ, ಉಪಾಧ್ಯಕ್ಷರಾದ ರವಿಂದ್ರ ಪೂಜಾರಿ ಹಾಗೂ ಮಾನಸ ಕಲಾ ತಂಡದ ತಬಲ ಗಾಯಕರುಗಳಾದ ಶ್ರೀನಿವಾಸ್, ವೆಂಕಟೇಶ್, ರಂಗಸ್ವಾಮಿ, ಚಂದ್ರಶೇಖರ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News