ಸಾಲ ದುರುಪಯೋಗ ಬೇಡ : ರಾಜೇಂದ್ರ ಪ್ರ ಸಾದ್

Update: 2016-07-17 17:27 GMT

ಮಡಿಕೇರಿ, ಜು.17 : ಸಹಕಾರ ಸಂಘಗಳು ನೀಡುವ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಶಕ್ತಿಯನ್ನು ಹೊಂದುವ ಮೂಲಕ ಎಲ್ಲಾ ಸಮುದಾಯದವರು ಅಭ್ಯುದಯವನ್ನು ಕಾಣಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದರು.

ನಗರದಲ್ಲ್ಲಿ ನೂತನವಾಗಿ ಆರಂಭವಾಗಿರುವ ಮಹಾಬೋಧಿ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಅಭ್ಯುದಯಕ್ಕಾಗಿ ನೀಡಲಾಗುವ ಸಾಲ ಸೌಲಭ್ಯಗಳನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದೆಂದು ಸಲಹೆ ನೀಡಿದರು.

  ದೇಶದಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವವರ ಸಂಖ್ಯೆ ಹೆಚ್ಚಾಗಿದ್ದು, ಇಂತಹವರು ಬದುಕನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಲವನ್ನು ನಿರ್ದಿಷ್ಟ ಕಾರ್ಯಕ್ಕ್ಕೆ ಮಾತ್ರ ಬಳಸಿಕೊಳ್ಳಬೇಕು. ಮೂರು ದಶಕಗಳ ಹಿಂದೆ ಐಆರ್‌ಡಿಪಿ ಯೋಜನೆಯಡಿ ಬಡ ವರ್ಗದ ಮಂದಿಗೆ ನೀಡಲಾಗುತ್ತಿದ್ದ 10 ಸಾವಿರ ರೂ. ಸಾಲ ಸೌಲಭ್ಯ ಬಡ ಮಂದಿಯ ಬದುಕಿನ ಸುಧಾರಣೆಗೆ ಯಾವೆಲ್ಲ ರೀತಿ ಸಹಕಾರಿಯಾಗಿದೆ ಎನ್ನುವ ಬಗ್ಗೆ ತಾವು ಸಂಶೋಧನೆ ನಡೆಸಿದಾಗ ಹಲವು ಅಂಶಗಳು ಬೆಳಕಿಗೆ ಬಂದಿದೆ. ಸಾಲ ಸೌಲಭ್ಯ ನೈಜ ಫಲಾನುಭವಿಗಳಿಗೆ ದೊರಕದಿರುವುದು ಮತ್ತು ಪಡೆದ ಸಾಲ ಹಬ್ಬ ಹರಿದಿನಗಳಲ್ಲಿ ಬಳಕೆಯಾಗಿ ಉದ್ದೇಶಿತ ಯೋಜನೆ ವಿಫಲವಾದ ಪ್ರಕರಣಗಳು ಬಹಳಷ್ಟು ನಡೆದಿವೆ. ಬಡ ಜನತೆಗೆ ಸಾಲ ಸೌಲಭ್ಯವನ್ನು ನೀಡುವುದರೊಂದಿಗೆ ಆರ್ಥಿಕವಾಗಿ ಸಬಲರಾಗುವಂತೆ ಸೂಕ್ತ ಮಾರ್ಗದರ್ಶನಗಳನ್ನು ನೀಡಲು ಸಹಕಾರ ಸಂಘಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಬಿ.ಡಿ. ಮಂಜುನಾಥ್‌ರವರು, ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾವಲಂಬನೆಯನ್ನು ಪಡೆಯುವುದಕ್ಕೆ ಬ್ಯಾಂಕ್, ಸಂಘಗಳು, ಸ್ವಸಹಾಯ ಗುಂಪುಗಳನ್ನು ರಚಿಸಿ, ಅಗತ್ಯ ಸಾಲದ ನೆರವನ್ನು ಒದಗಿಸುತ್ತಿವೆೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ಸಿ. ಸತೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಆರ್. ವಿಜಯ ಕುಮಾರ್, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಎಂ.ಇ. ಮೋಹನ್, ಬೆಟ್ಟದಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಎಚ್.ಪಿ. ರಜನಿ, ಪತ್ರಕರ್ತೆ ಎಚ್.ಬಿ. ಯಶೋಧಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕನ್ನಂಡ ಸಂಪತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News