ಜನಸಂಖ್ಯೆ ಹೆಚ್ಚಳದಿಂದ ದೇಶದಲ್ಲಿ ಸಮಸ್ಯೆ ಉಲ್ಭಣ: ವೀರೇಶ್ ಕೊಟಗಿ

Update: 2016-07-18 17:20 GMT

ಸೊರಬ, ಜು.18: ಜನ ಸಂಖ್ಯೆ ಹೆಚ್ಚಳದಿಂದ ದೇಶದಲ್ಲಿ ಉದ್ಯೋಗ, ವಸತಿ ಹಾಗೂ ಆಹಾರ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು ಭವಿಷ್ಯದ ಹಿತ ದೃಷ್ಟಿಯಿಂದ ಜನಸಂಖ್ಯೆ ನಿಯಂತ್ರಣ ಅತೀ ಆವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ವೀರೇಶ್ ಕೊಟಗಿ ತಿಳಿಸಿದರು,

ಪಟ್ಟಣದ ಲಯನ್ಸ್ ಕಲ್ಯಾಣಮಂದಿರದಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಇದರಿಂದಾಗಿ ಒಟ್ಟು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ನಿರುದ್ಯೋಗ ಹಾಗೂ ಆಹಾರ ಸಮಸ್ಯೆ ತೀವ್ರವಾಗಿ ಎದುರಾಗುತ್ತಿದೆ ಎಂದ ಅವರು, ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ವಿಶೇಷ ಕಾನೂನು ರೂಪಿಸಿ ಕಡಿವಾಣ ಹಾಕಲು ಮುಂದಾಗಬೇಕಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಂದಗಿ ಬಸವರಾಜ್ ಶೇಟ್ ಮಾತನಾಡಿ, ಪ್ರಪಂಚದ ಎಲ್ಲ್ಲ ದೇಶಗಳ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಚೀನಾ ಹಾಗೂ ಭಾರತ ದೇಶಗಳ ಜನಸಂಖ್ಯೆ ಹೆಚ್ಚಾಗಿದ್ದು, ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ-ಹೊಸ ಆವಿಷ್ಕಾರಗಳು ನಡೆದಿರುವುದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಇಲಾಖೆಗಳು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡುವ ಆವಶ್ಯಕತೆ ಇದೆ ಎಂದರು.

ಪಟ್ಟಣ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಸತೀಶ್, ಡಾ. ಲೋಕೇಶ್, ತಾಲೂಕು ಪಂಚಾಯತ್ ಸದಸ್ಯರಾದ ಸುರೇಶ್ ಹಾವಣ್ಣನವರ್, ಲತಾ ಸುರೇಶ್, ಪಪಂ ಸದಸ್ಯರಾದ ಮಂಚಿ ಹನುಮಂತಪ್ಪ, ಸಜಾಯತುಲ್ಲಾ, ವಕೀಲ ವೈ.ಜಿ ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News