×
Ad

ಶಾಲಾ ಮೈದಾನ ಉಳಿಸಲು ಮನವಿ: ಸಚಿವ ದೇಶಪಾಂಡೆ

Update: 2016-07-18 22:55 IST

ಕಾರವಾರ, ಜು.18: ತಾಲೂಕಿನ ಅಮದಳ್ಳಿಯ ಶಾಲಾ ಮೈದಾನ ಪ್ರತಿಯೊಬ್ಬರಿಗೂ ಅವಶ್ಯವಾಗಿದ್ದು, ಅದನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ನೀಡದೆ ಉಳಿಸಿಕೊಳ್ಳಲಾಗುವುದು ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. ಮದಳ್ಳಿಯ ಜಿ.ಕೆ. ಶಿವಪ್ರಸಾದ್ ನೇತೃತ್ವದಲ್ಲಿ ಮೂವತ್ತಕ್ಕೂ ಅಧಿಕ ಗ್ರಾಮಸ್ಥರ ನಿಯೋಗದ ಮನವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಸರಕೋಡಿನ ಕಾರ್ಯಕ್ರಮವೊಂದರಲ್ಲಿ ಚತುಷ್ಪಥ ಹೆದ್ದಾರಿ ಯೋಜನೆ ಸಂಬಂಧ ಅಮದಳ್ಳಿ ಮೈದಾನದ ಕುರಿತಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಹಾಗೂ ಯೋಜನೆಯ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪೆನಿಯ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆಯಿಸಿ ಈ ಬಗ್ಗೆ ಚರ್ಚೆ ನಡೆಸಿ ಯೋಜನೆಯಿಂದ ನೈಸರ್ಗಿಕ ಮೈದಾನಕ್ಕೆ ಧಕ್ಕೆಯಾಗದಂತೆ ಕಾಮಗಾರಿ ನಡೆಸಿ ಪರ್ಯಾಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಅಮದಳ್ಳಿ ಗ್ರಾಮದ 25ಕ್ಕೂ ಅಧಿಕ ಗ್ರಾಮಸ್ಥರ ನಿಯೋಗ ಸಚಿವ ಆರ್.ವಿ. ದೇಶಪಾಂಡೆ ಅವರ ಬಳಿ ತಾಲೂಕಿನಲ್ಲಿ ವಿಸ್ತಾರವಾದ ಮೈದಾನದ ಹಿನ್ನೆಲೆ ಹಾಗೂ ಯೋಜನೆಗೆ ಸ್ವಾಧೀನ ಗೊಂಡಲ್ಲಿ ಉಂಟಾಗುವ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದರು. ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮ ಬಡ ಹಿಂದುಳಿದ ಜನರಿಂದ ಕೂಡಿದ ಗ್ರಾಮವಾಗಿದೆ. ಹೈಸ್ಕೂಲಿಗೆ ಊರಿನ ದಾನಿಗಳು ಊರಿನ ಶಿಕ್ಷಣ ಮತ್ತು ಕ್ರೀಡೆಯ ಅಭಿವೃದ್ಧಿಗಾಗಿ (ನಾಲ್ಕು ಎಕರೆ ಮೂವತ್ತೊಂಬತ್ತು ಗುಂಟೆ) ತಮ್ಮ ಖಾಸಗಿ ಜಮೀನನ್ನು ದಾನವಾಗಿ ನೀಡಿರುತ್ತಾರೆ. ಈ ಜಮೀನಿನಲ್ಲಿ ಕಾರವಾರ ತಾಲೂಕಿನಲ್ಲಿಯೇ ವಿಸ್ತಾರವಾದ ನೈಸರ್ಗಿಕ ಆಟದ ಮೈದಾನ ಇದೆ. ಇಲ್ಲಿ ಪ್ರತಿ ವರ್ಷ ವಲಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಕ್ರೀಡಾಕೂಟಗಳು ನಡೆಯುತ್ತವೆ. ಮೈದಾನದಿಂದ ಸುತ್ತಮುತ್ತಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲದೆ ಸ್ಥಳೀಯ ಕ್ರೀಡಾ ಪ್ರತಿಭೆಗಳು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಲು ಸಾಧ್ಯವಾಗಿದೆ. ಇಂತಹ ಬೃಹತ್ ವಿಶಾಲವಾದ ಮೈದಾನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕೆಂಗಣ್ಣಿಗೆ ಗುರಿಯಾಗಿದೆ.

ಯೋಜನೆ ಕೈಗೆತ್ತಿಕೊಂಡಿರುವ ಐಆರ್‌ಬಿ ಕಂಪೆನಿ ಸಿಬ್ಬಂದಿ ಯಾವ ಮುನ್ಸೂಚನೆ ನೀಡದೆ ಅವೈಜ್ಞಾನಿಕವಾಗಿ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ. ಇದರಿಂದಾಗಿ ಅದೆಷ್ಟೋ ವರ್ಷಗಳಿಂದ ಹಳ್ಳಿಗರಿಗೆ ಹಾಗೂ ಯುವಜನರಿಗೆ ವರದಾನವಾಗಿದ್ದ ಕ್ರೀಡಾಂಗಣವನ್ನು ಈ ಅವೈಜ್ಞಾನಿಕ ಕಾಮಗಾರಿ ಕೈ ಬಿಟ್ಟು ಉಳಿಸಿ ಕೊಡುವಂತೆ ಸಚಿವರಲ್ಲಿ ನಿಯೋಗ ವಿನಂತಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News