×
Ad

ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗೆ ಪ್ರತಿಭಟನೆ

Update: 2016-07-19 22:51 IST

ದಾವಣಗೆರೆ, ಜು.19: ಸರಕಾರಿ ಶಾಲೆಗಳ ಪುನಶ್ಚೇತನದ ದೃಷ್ಟಿಯಿಂದ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

 ನಗರದ ಗುರುಭವನದ ಮುಂಭಾಗದಲ್ಲಿ ಧರಣಿ ನಡೆಸಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಘಟಕದ ಪದಾಧಿಕಾರಿಗಳು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಎಲ್. ಯಶೋಧರ ಅವರು, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು 21 ವಿಷಯಗಳನ್ನು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 33 ವಿಷಯಗಳನ್ನು ಬೋಧನೆ ಮಾಡಬೇಕಿದೆ. ಶಿಕ್ಷಕರು ಶಾಲಾ ಪಾಠದ ಜೊತೆಗೆ ಶಿಕ್ಷಣೇತರ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ತೊಂದರೆ ಉಂಟಾಗಿದೆ. ಕಳೆದ ಜು. 2ರಂದು ಸರಕಾರ ಶಿಕ್ಷಕರ ಹೆಚ್ಚುವರಿ ಇರುವ ಕಡೆ ಬೇರೆ ಕಡೆ ವರ್ಗಾಯಿಸುವ ಅದೇಶ ಹೊರಡಿಸಿದೆ. ಎಲ್ಲೆಡೆ ಈಗಾಗಲೇ ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಮುಕ್ತಾಯವಾಗಿದೆ. ಒಂದೇ ವರ್ಷದಲ್ಲಿ 2 ಬಾರಿ ಶಿಕ್ಷಕರ ಸ್ಥಳಾಂತರ ಮಾಡುತ್ತಿರುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಒಳ್ಳೆಯದಲ್ಲ. ಶಾಲೆಗಳು ಈಗಾಗಲೇ ಪ್ರಾರಂಭವಾಗಿ ಶಿಕ್ಷಕರು ತಮಗೆ ನಿಗದಿಗೊಳಿಸಿದ ತರಗತಿಗಳು ಹಾಗೂ ಪಠ್ಯ ವಿಷಯಗಳನ್ನು ಹಂಚಿಕೆ ಮಾಡಿಕೊಂಡು ಬೋಧನೆಯಲ್ಲಿ ನಿರತರಾಗಿದ್ದಾರೆ. ಈ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಎಸ್.ಎಚ್. ಚಂದ್ರಪ್ಪ, ಎಂ. ಸಿದ್ದೇಶ್, ನಾಗರತ್ನಮ್ಮ ಕೆ. ಕರಿಬಸಯ್ಯ, ಎಚ್. ಚಂದ್ರಪ್ಪ, ಇಂದುಮತಿ, ಎ.ಕೆ. ಶಿವಮೂರ್ತಿ, ಗಂಗಾಧರನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News