ಪರಿಸರ ಸಮತೋಲನ ಕಾಯ್ದುಕೊಳಿ್ಳ: ನ್ಯಾ. ಮಹಾಸ್ವಾಮೀಜಿ
ಮಡಿಕೇರಿ, ಜು.19: ಪರಿಸರ ಸಂರಕ್ಷಣೆಯ ಮೂಲಕ ಪ್ರತಿಯೊಬ್ಬರು ಪರಿಸರ ಸಮತೋಲನ ಕಾಯ್ದುಕೊಳ್ಳಲು ಮುಂದಾಗಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮಾಸ್ಟರ್ ಆರ್. ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ನವೋದಯ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದ ಗಾಳಿಬೀಡು ನವೋದಯ ವಿದ್ಯಾಲಯದಲ್ಲಿ ಮಂಗಳವಾರ ಸಸಿ ನೆಡುವ ಮೂಲಕ ಒಂದು ವಾರಗಳ ಕಾಲ ನಡೆಯುವ ಗಿಡ ನೆಡುವ ಸಪ್ತಾಹಕ್ಕೆ ಚಾಲನೆ ನೀಡಿ ನ್ಯಾಯಾಧೀಶರು ಮಾತನಾಡಿದರು.
ಪರಿಸರದ ಸುತ್ತಮುತ್ತಲಿನ ಗಿಡ, ಮರ, ಬೆಟ್ಟ, ಗುಡ್ಡ, ನದಿ, ಸರೋವರ ಹಾಗೂ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವಂತಾಗಬೇಕು. ಮುಖ್ಯವಾಗಿ ಸಸಿ ನೆಡುವುದರ ಮಹತ್ವದ ಬಗ್ಗೆ ಅರಿವು ಪ್ರತಿಯೊಬ್ಬ ನಾಗರಿಕನಲ್ಲಿ ಇರಬೇಕು ಎಂದರು.
ದೇಶದ ಇತಿಹಾಸವನ್ನು ಮೆಲುಕು ಹಾಕಿದಾಗ ಸಾಮ್ರಾಟ ಅಶೋಕ ರಾಜ ಚಕ್ರವರ್ತಿಯು ಸಾಲು ಮರಗಳನ್ನು ನೆಟ್ಟು ಪರಿಸರ ಉಳಿಸುವಲ್ಲಿ ಮಹತ್ವದ ಹೆಜ್ಜೆಯಿಟ್ಟರು. ಹಾಗೆಯೇ ಸಾಲು ಮರದ ತಿಮ್ಮಕ್ಕ ಅವರು ಸಾಲು ಮರಗಳನ್ನು ಬೆಳೆಸಿದವರು. ಈ ಮಹಾನ್ ಪರಿಸರ ಪ್ರೇಮಿಗಳು ಮಾಡಿದ ಸಾಧನೆಗಳು ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಬೇಕು ಎಂದರು.
ಜಿಲ್ಲೆಯಲ್ಲಿ 7 ದಿನಗಳ ಕಾಲ ನಡೆಯುವ ಗಿಡ ನೆಡುವ ಕಾರ್ಯಕ್ರಮಗಳಿಗೆ ಸರಕಾರಿ ಇಲಾಖೆ, ಸಂಘ ಸಂಸ್ಥೆಗಳ ಸಹಕಾರ ನೀಡುತ್ತಿದೆ ಆದ್ದರಿಂದ ಪ್ರತಿಯೊಬ್ಬರಲ್ಲ್ಲೂ ಗಿಡ ನೆಡುವ ಮಹತ್ವದ ಅರಿವು ಮೂಡಿಸುವಂತೆ ಆಗಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಅವರು ಮಾತನಾಡಿ ಉತ್ತಮ ಪರಿಸರದಿಂದ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಅವರು ಮಾತನಾಡಿ ಪರಿಸರ ಮಾಲಿನ್ಯ, ಹವಾಮಾನ ವ್ಯತ್ಯಾಸಗಳು ಪರಿಸರ ನಾಶದಿಂದಲೇ ಆಗುತ್ತಿವೆೆ. ಆದ್ದರಿಂದ ಗಿಡಗಳನ್ನು ನೆಡುವುದು ಮತ್ತು ಮರಗಳನ್ನು ಪೋಷಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತರಾದ ಕೆ.ಬಿ.ಕಾಳಪ್ಪ ಅವರು ವಿದ್ಯಾರ್ಥಿಗಳಿಗೆ ಪರಿಸರ ಉಳಿಯುವಿಕೆಯ ಬಗ್ಗೆ ಪ್ರತಿಜ್ಞಾ ವಿಧಿ ಭೋದಿಸಿದರು, ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವನ ಮಹೋತ್ಸವ ಗೀತೆ, ಕಂಸಾಲೆ, ನಾಟಕ ಪ್ರದರ್ಶನಗಳು ನಡೆದವು.
ಈ ಸಂದರ್ಭದಲ್ಲಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಮೇಶ್ ಬಾಬು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್, ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ. ಜೋಸೆಫ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಪಾಧ್ಯಕ್ಷರಾದ ಬೇಬಿಮ್ಯಾಥ್ಯು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮೈಸೂರು ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು, ಜಿಲ್ಲಾ ಪರಿಸರಾಧಿಕಾರಿ ಜಿ.ಆರ್. ಗಣೇಶನ್, ಗಾಳಿಬೀಡು ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀಮತಿ ವಿಜಯ ಮತ್ತಿತರರು ಶಾಲಾ ಮಕ್ಕಳ ಸಹಕಾರದೊಂದಿಗೆ ಗಿಡಗಳನ್ನು ನೆಟ್ಟರು. ಗಿಡ ನೆಡುವ ಸಪ್ತಾಹವು ಜು.20 ರಂದು ನಲ್ವತ್ತೆಕ್ರೆ ಎಸ್.ಎನ್.ಡಿ.ಪಿ ಕಟ್ಟಡ ಆವರಣ, ಜು.21 ರಂದು ವಿದ್ಯಾನಗರದ ನೂತನ ನ್ಯಾಯಲಯ ಕಟ್ಟಡ ಆವರಣ, ಜು.22 ರಂದು ನಗರದ ಬಾಲಕರ ಬಾಲ ಮಂದಿರ, ಹಾಗೂ ಜು. 25 ರಂದು ನಗರದ ರಾಜರಾಜೇಶ್ವರಿ ವಿದ್ಯಾಲಯದಲ್ಲಿ ನಡೆಯಲಿದೆ.