ಸೋನಿಯಾ, ರಾಹುಲ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ
ಶಿವಮೊಗ್ಗ, ಜು.19: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದು, ತಕ್ಷಣವೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕವು ಮಂಗಳವಾರ ನಗರದ ಗೋಪಿ ವೃತ್ತದಲ್ಲಿ ಧರಣಿ ನಡೆಸಿತು. ಶೋಭಾ ಕರಂದ್ಲಾಜೆ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹಾಗೆಯೇ ಓರ್ವ ಹೆಣ್ಣು ಮಗಳಾಗಿ ಇನ್ನೊಬ್ಬ ಮಹಿಳೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವ ಮುನ್ನ ಯೋಚಿಸಬೇಕು. ಆದರೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿದ್ದಾಗಲೂ ಸಾಕಷ್ಟು ವಿವಾದವನ್ನು ಮಾಡಿಕೊಂಡಿದ್ದರು. ಇದೀಗ ಲೋಕಸಭೆ ಸದಸ್ಯೆಯಾದ ನಂತರವೂ ವಿವಾದಗಳಿಂದ ಮುಕ್ತರಾಗಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಟೀಕಿಸುವ ಯಾವುದೇ ನೈತಿಕತೆ ಅವರಿಗಿಲ್ಲವಾಗಿದೆ. ಟೀಕಿಸುವ ಮುನ್ನ ತಮ್ಮ ಅರ್ಹತೆ ಏನೆಂಬುವುದನ್ನು ಅರಿತುಕೊಂಡು ಅವರು ಮಾತನಾಡಲಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಕರ್ನಾಟಕದ ಜನತೆಯು ಸೋನಿಯಾ ಮತ್ತು ರಾಹುಲ್‌ಗೆ ಪೊರಕೆಯಲ್ಲಿ ಹೊಡೆಯ ಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಕರ್ನಾಟಕದ ಯಾವ ಭಾಗದ ಜನ ಈ ಮಾತನ್ನು ಹೇಳಿದ್ದಾರೆ ಎನ್ನುವುದನ್ನು ಮೊದಲು ಶೋಭಾ ತಿಳಿಸಬೇಕು. ಇಲ್ಲವಾದಲ್ಲಿ ತಾವಾಡಿರುವ ಮಾತಿಗೆ ಅವರು ಕ್ಷಮೆಯಾಚಿಸಬೇಕು ಎಂದು ಧರಣಿನಿರತು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಬಿಎಸ್‌ವೈ ಅವರಿಂದ ಚಾಲ್ತಿಯಲ್ಲಿರುವ ಶೋಭಾ ತಾನೂ ಒಂದು ಕಾಲದಲ್ಲಿ ಅಧಿಕಾರವಿಲ್ಲದೆ ಸುತ್ತಾಡಿಕೊಂಡಿದ್ದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ
ಧರಣಿಯಲ್ಲಿ ಡಿಸಿಸಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್, ಮಹಿಳಾ ಘಟಕದ ಪ್ರಮುಖರಾದ ವಿಜಯಲಕ್ಷ್ಮೀ ಸಿ. ಪಾಟೀಲ್, ಮಮತಾ ಸಿಂಗ್, ಮುಮ್ತಾಝ್ ಮತ್ತಿತರರು ಹಾಜರಿದ್ದರು.