ಶೋಭಾಗೆ ಹೈಕೋರ್ಟ್ ತುರ್ತು ನೋಟಿಸ್
ಬೆಂಗಳೂರು, ಜು.19: ಚುನಾವಣಾ ಖರ್ಚು ವೆಚ್ಚದ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಉಡುಪಿ ತಾಲೂಕಿನ ನೀಲಾವರದ ಅನೂಪ್ ಕುಮಾರ್ ಶೆಟ್ಟಿ ಸಲ್ಲಿಸಿರುವ ರಿಟ್ ಅರ್ಜಿ ಯನ್ನು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಎ.ವಿ.ನಿಶಾಂತ್, 2014ರ ಲೋಕಸಭಾ ಚುನಾವಣೆ ಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಆದರೆ ಚುನಾವಣೆ ಘೋಷಣೆಯಾದ ದಿನದಿಂದ ಫಲಿತಾಂಶ ಪ್ರಕಟವಾ ಗುವವರೆಗೆ ತಾವು ಮಾಡಿದ ಚುನಾವಣಾ ಖರ್ಚು ವೆಚ್ಚಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಕ್ತ ಮಾಹಿತಿ ನೀಡಿಲ್ಲ ಎಂದು ವಿವರಿಸಿದರು.
ಶೋಭಾ ಅವರು ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 10ರ ಅನುಸಾರ ಚುನಾವಣಾ ಆಯೋಗಕ್ಕೆ ತಮ್ಮ ಖರ್ಚು ವೆಚ್ಚಗಳ ಸಮರ್ಪಕ ವಿವರ ನೀಡದೆ ಅಪರಾಧ ಎಸಗಿದ್ದಾರೆ. ಹೀಗಾಗಿ, ಅವರನ್ನು ಅನರ್ಹಗೊಳಿಸಬೇಕು ಎಂದು ಅನೂಪ್‌ಕುಮಾರ್ ಶೆಟ್ಟಿ ಕೇಂದ್ರ ಚುನಾವಣಾ ಆಯೋಗಕ್ಕೆ 2014ರ ಡಿಸೆಂಬರ್ 19ರಂದು ದೂರು ಸಲ್ಲಿಸಿದ್ದರು. ಆದರೆ ಆಯೋಗ ಈತನಕ ದೂರನ್ನು ದಾಖಲಿಸಿಕೊಂಡಿಲ್ಲ. ಹೀಗಾಗಿ, ಕೇಂದ್ರ ಚುನಾವಣಾ ಆಯೋಗಕ್ಕೆ ಈ ಕುರಿತಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಪ್ರಕರಣದಲ್ಲಿ ಸಂಸದೆ ಶೋಭಾ ಅವರನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡುವಂತೆ ಸೂಚಿಸಿದ ನ್ಯಾಯಮೂರ್ತಿಗಳು, ಕೇಂದ್ರ ಚುನಾವಣಾ ಆಯೋಗ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿದರು. ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ. ಶೋಭಾ ಕರಂದ್ಲಾಜೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಎಸ್.ಜಯಪ್ರಕಾಶ್ ಶೆಟ್ಟಿ ವಿರುದ್ಧ ಜಯಗಳಿಸಿದ್ದರು.