×
Ad

ಉರ್ದು ಶಾಲೆಗಳ ಶಿಕ್ಷಕರನ್ನು ಹಚ್ಚುವರಿ ಮಾಡದಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

Update: 2016-07-20 18:43 IST

ಮುದ್ದೇಬಿಹಾಳ,ಜು.20:ಇಲ್ಲಿನ ಮಹೆಬೂಬ ನಗರದಲ್ಲಿರುವ ಸರ್ಕಾರಿ ಉರ್ದು ಹೆಣ್ಣುಮಕ್ಕಳ ಮತ್ತು ಗಂಡುಮಕ್ಕಳ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಹೆಚ್ಚುವರಿ ಪಟ್ಟಿಯಿಂದ ಕೈಬಿಟ್ಟು ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಉರ್ದು ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಕರ್ನಾಟಕ ಮುಸ್ಲೀಂ ಕೌನ್ಸಿಲ್ ಪದಾಧಿಕಾರಿಗಳು, ಪಾಲಕರು ಬುಧವಾರ ಪಟ್ಟಣದ ಎಲ್ಲ ಉರ್ದು ಶಾಲೆಗಳನ್ನು ಬಂದ್ ಮಾಡಿಸಿ, ನಾಲತವಾಡ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

          ಈ ಶಾಲೆಗಳಲ್ಲಿ ಮುಸ್ಲಿಮ್ ಜನಸಂಖ್ಯೆಗನುಣವಾಗಿ ಮಕ್ಕಳ ಸಂಖ್ಯೆ ಇದೆ. ಸರ್ಕಾರ ನಿಗದಿಪಡಿಸಿದ ಶಿಕ್ಷಕರು, ಮಕ್ಕಳ ಅನುಪಾತಕ್ಕೆ ಸಮನಾಗಿದೆ. ಇನ್ನೂ ಶಾಲೆಗಳಿಗೆ ಮಕ್ಕಳು ಪ್ರವೇಶ ಪಡೆಯುವ ಸಂಭವ ಇದೆ. ಇಂಥ ಸಂದರ್ಭ ಹೆಚ್ಚುವರಿ ಎಂದು ಪರಿಗಣಿಸಿ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡುವುದರಿಂದ ವಿಷಯಗಳ ಪಾಂಡಿತ್ಯ ಹೊಂದಿದ ಶಿಕ್ಷಕರ ಕೊರತೆ ಉಂಟಾಗಿ ಮಕ್ಕಳ ಕಲಿಕೆಗೆ ಹಿನ್ನೆಡೆ ಆಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

    ಪ್ರತಿಭಟನೆಯಿಂದ ಮುಖ್ಯರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿದು ಪೊಲೀಸರು ಮತ್ತು ಪ್ರಭಾರ ಬಿಇಓ ಎಂ.ಎಂ.ಬೆಳಗಲ್ಲ ಸ್ಥಳಕ್ಕೆ ಆಗಮಿಸಿ ಧರಣಿ ಕೈಬಿಡುವಂತೆ ಮಾಡಿದ ಮನವಿ ವಿಫಲಗೊಂಡಿತು. ಧರಣಿಗೂ ಅಧಿಕಾರಿಗಳು ನಿಲುವು ಬದಲಿಸದೆ ಇದ್ದಾಗ ರೋಷಗೊಂಡ ಪಾಲಕರು, ಎಸ್ಡಿಎಂಸಿ ಸದಸ್ಯರು ಶಾಲೆಯ ಕೊಠಡಿಗಳಿಗೆ ಬೀಗ ಜಡಿದು ಕಲಿಕಾ ಚಟುವಟಿಕೆ ಸ್ಥಗಿತಗೊಳಿಸಿದರು.

 ಉರ್ದು ಶಾಲೆಗಳಲ್ಲಿ ಮುಸ್ಲಿಮ್ ಸಮಾಜದ ಜನರ ಮಕ್ಕಳು ಮಾತ್ರ ಪಾಠ ಕಲಿಯುತ್ತಾರೆ. ಮುಸ್ಲೀಂರ ಜನಸಂಖ್ಯೆ ಕಡಿಮೆ ಇರುತ್ತದೆ. ಹೀಗಾಗಿ ಮಕ್ಕಳ ಸಂಖ್ಯೆಯೂ ಕಡಿಮೆ ಇರುತ್ತದೆ. ಹೀಗಾಗಿ ಉರ್ದು ಶಾಲೆಗಳಿಗೆ ಶಿಕ್ಷಕರ ಅನುಪಾತವನ್ನು 15:1 ರಂತೆ ಪರಿಗಣಿಸಬೇಕು. ಇದರನ್ವಯ ಈಗಾಗಲೇ ಹೆಚ್ಚುವರಿ ಎಂದು ಪರಿಗಣಿಸಿ ಬೇರೆಡೆ ವರ್ಗಾವಣೆಗೊಳಿಸಿದ ಶಿಕ್ಷಕರ ವರ್ಗಾವಣೆ ರದ್ದುಪಡಿಸಬೇಕು. ಮಲೆನಾಡು ಪ್ರದೇಶಗಳಲ್ಲಿ ಶಿಕ್ಷಕರು ಮಕ್ಕಳ ಅನುಪಾತ 1:18 ರಂತೆ ಇದೆ. ಉಳಿದೆಡೆಯೂ ಇದೇ ತತ್ವ ಪಾಲಿಸಬೇಕು. ಮುಸ್ಲೀಂ ಸಮಾಜದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಗತ್ಯ ಶಿಕ್ಷಕರ ಅವಶ್ಯಕತೆ ಇದೆ ಎಂದು ಧರಣಿ ನಿರತರ ಮುಖಂಡರಾದ ಕರ್ನಾಟಕ ಮುಸ್ಲೀಂ ಕೌನ್ಸಿಲ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ್, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಅಧಿಕಾರಿಗಳಿಗೆ ಒತ್ತಾಯಿಸಿದರು.

1:15 ಅನುಪಾತ ಪದ್ಧತಿಯನ್ನು ಉರ್ದು ಶಾಲೆಗಳಲ್ಲಿ ಪಾಲಿಸಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ಉರ್ದು ಶಾಲೆಗಳನ್ನು ಬಂದ್ ಮಾಡಿಸಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಈ ಮುಖಂಡರು ಎಚ್ಚರಿಸಿದರು.

          ಬೇಡಿಕೆಯ ಸೂಕ್ಷ್ಮತೆ ಮತ್ತು ಒತ್ತಡ ಗಂಭೀರವಾಗಿ ಪರಿಗಣಿಸಿದ ಬಿಇಓ ಬೆಳಗಲ್ಲ ಅವರು ಬೇಡಿಕೆಯ ಕುರಿತು ಮನವಿಯೊಂದನ್ನು ಸ್ವೀಕರಿಸಿ ಅದನ್ನು ಮೇಲಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿ ಸಧ್ಯ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಬಂದ್, ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವಲ್ಲಿ ಯಶ ಕಂಡರು.

          ಕೆಎಂಸಿ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ್, ಉರ್ದು ಹೆಣ್ಣು ಮಕ್ಕಳ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರೂ ಆದ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಎಸ್.ಎಂ.ಮಕಾನದಾರ, ಎಂ.ಆರ್.ಕುಂಟೋಜಿ, ಎ.ಜಿ.ದಖನಿ, ಎನ್.ಆರ್.ಬಾಗಲಕೋಟ, ಉರ್ದು ಗಂಡು ಮಕ್ಕಳ ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಶಾಜಾದಬಿ ಹುಣಚಗಿ, ಆರ್.ಎ.ದಖನಿ, ಎಸ್.ಡಿ.ಅತ್ತಾರ, ಹಸನ್ ಎಕೀನ್, ಸಾಹೇಬಲಾಲ ರಿಸಾಲ್ದಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News