ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ಜಿಲ್ಲಾಡಳಿತಕೆ್ಕ ಮನವಿ
ಕಾರವಾರ, ಜು.20: ನಗರದ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಕಡಲ ತೀರದಲ್ಲಿ ಗುಡಿಸಲು ನಿರ್ಮಿಸಿಕೊಂಡಿರುವ ವಸತಿ ರಹಿತ ಮೀನುಗಾರರಿಗೆ ಬೇರೆಡೆ ನಿವೇಶನ ಮಂಜೂರು ಮಾಡಿ ಪುನರ್ವಸತಿ ಕಲ್ಪಿಸಬೇಕು ಎಂದು ಹರಿಕಂತ್ರ ಖಾರ್ವಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ಟಿ. ತಾಂಡೇಲ್ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.
ಇಲ್ಲಿನ ಮೀನುಗಾರ ಮಹಿಳೆಯರು ಸಣ್ಣ ಸಣ್ಣ ಗುಡಿಸಲುಗಳನ್ನು ಕಟ್ಟಿಸಿಕೊಂಡಿದ್ದಾರೆ. ಅವರು ಮೀನುಗಾರಿಕೆಗೆ ಸಂಬಂಧಿಸಿದ ಉದ್ಯೋಗಮಾಡುತ್ತಿದ್ದು, ಅವರ ಹೆಸರಿನಲ್ಲಿ ಬೇರೆ ಎಲ್ಲಿಯೂ ನಿವೇಶನ ಇಲ್ಲ. ವಾಸ್ತವ್ಯದ ಜೊತೆಗೆ ಒಣಮೀನು ಸಂಗ್ರಹಿಸಿಡಲು ಗುಡಿಸಲು ಅನುಕೂಲವಾಗಿದೆ. ಆದರೆ ಇತ್ತೀ
ಚೆಗೆ ಜಿಲ್ಲಾಡಳಿತವು ತಹಶೀಲ್ದಾರ್ ಮುಖಾಂತರ ಗುಡಿಸಲುಗಳನ್ನು ತಕ್ಷಣ ತೆರವುಗೊಳಿಸಲು ಸೂಚಿಸಿರುತ್ತಾರೆ. ಮಳೆಗಾಲವಾಗಿರುವುದರಿಂದ ವಾಸ್ತವ್ಯದ ಸರಂಜಾಮು ಹಾಗೂ ಸಂಗ್ರಹಿಸಿದ ಒಣಮೀನನ್ನು ಬೇರೆಡೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಳೆಗಾಲ ಮುಗಿದು ಬೇರೆಡೆ ಪರ್ಯಾಯ ವ್ಯವಸ್ಥೆ ಆಗುವವರೆಗೆ ಅವರಿಗೆ ತೆರವುಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅಲ್ಲದೇ ತಾಲೂಕಿನಲ್ಲಿ ಸ್ವಂತ ನಿವೇಶನ ಅಥವಾ ಮನೆ ಇಲ್ಲದ ಮಹಿಳೆಯರಾದ ಶಾಮಲಾ ದಿಲೀಪ್ ಬಾನಾವಳಿ, ರುಕ್ಮಾ ಪ್ರಕಾಶ ಅಂಕೋಲೆಕರ, ಕುಸುಮಾ ಅರ್ಜುನ್ ಕುಡ್ತಳಕರ, ಅನುಸೂಯಾ ಪಾಂಡು ಮೇಸ್ತಾ, ಗಿರಿಜಾಬಾಯಿ ಕುಡ್ತಳಕರ, ರಮಾ ಗೋವಿಂದ ಮೇಸ್ತ, ಜನಾಬಾಯಿಗುಣೋ ಕುಡ್ತಳಕರ, ನಾಗರತ್ನ ನಾಗೇಶ ಬಾನಾವಳಿ, ಶಾರದಾ ದೇವಿದಾಸ ಬಾನಾವಳಿ, ಲತಾ ಮಹಾದೇವ ಲಮಾಣಿ, ರೇಖಾ ಅಶೋಕ್ ಮಾಳ್ಸೇಕರ, ಕೇಸರಿ ಸುರೇಶ ಮಾಳ್ಸೇಕರ, ಸೀತಾ ದಿನಕರ ಸುರಂಗೇಕರ, ಬೇಬಿ ಗೌಸ್ ಶೇಖ್ ಮುಂತಾದವರು ಮಳೆಗಾಲ ಮುಗಿಯುವವರೆಗೆ ಜೀವನೋಪಾಯಕ್ಕಾಗಿ ಈಗಿರುವ ಸ್ಥಳದಲ್ಲಿಯೇ ತಾತ್ಕಾಲಿಕವಾಗಿ ಮುಂದುವರಿಸಲು ಅವಕಾಶ ಮಾಡಿಕೊಡಲು ಮನವಿ ಮಾಡಿಡಿದ್ದಾರೆ. ಆದ್ದರಿಂದ ಇವರಿಗೆ ಪರ್ಯಾಯ ವ್ಯವಸ್ಥೆಯಾಗುವವರೆಗೆ ಗುಡಿಸಲು ತೆರುವುಗೊಳಿಸಬಾರದು. ಮಳೆಗಾಲ ಮುಗಿದ ಬಳಿಕ ಜಿಲ್ಲಾಡಳಿತದಿಂದ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಕೋರಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ರೋಹಿದಾಸ ಬಾನಾವಳಿ, ದಾಮೋದರ ಕುಡ್ತಳಕರ, ಶ್ಯಾಮಲಾ ಬಾನಾವಳಿ ಮತ್ತಿತರ ಮೀನುಗಾರ ಮಹಿಳೆಯರು ಈ ಸಂದರ್ಭದಲ್ಲಿ ಉಪಸಿತರಿದ್ದರು.