ಕಾರವಾರ: ಭೂಮಿ ಮಂಜೂರಿಗೆ ಆಗ್ರಹಿಸಿ ಧರಣಿೆ
ಕಾರವಾರ, ಜು.20: ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರಿಗೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಭೂಮಿ ಮತ್ತು ಹಕ್ಕು ವಂಚಿತ ಹೋರಾಟ ಸಮಿತಿಯವರು ಬುಧವಾರ ಜಿಲ್ಲಾಡಳಿತದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಯಾದ ವಿವಿಧ ಯೋಜನೆಗಳಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು, ಈ ಪೈಕಿ ಹಲವರಿಗೆ ಈವರೆಗೂ ಯಾವುದೇ ಪರಿಹಾರ ಬಂದಿಲ್ಲ. ನಿರಾಶ್ರಿತರಿಗೆ ಕೊಡಲ್ಪಡುವ ಭೂಮಿ, ಉದ್ಯೋಗ, ಸಾರಿಗೆ ಹಾಗೂ ಪುನರ್ವಸತಿಯನ್ನು ಕಲ್ಪಿಸಿಲ್ಲ ಎಂದು ಆರೋಪಿಸಿದರು. ಸೀಬರ್ಡ್ ಯೋಜನೆಯಲ್ಲಿ ನಿರಾಶ್ರಿತರಾದ ಸಾವಿರಾರು ಕುಟುಂಬಗಳಿಗೆ ಇದುವರೆಗೂ ಸರಿಯಾಗಿ ಪುನರ್ವಸತಿಯಾಗಿಲ್ಲ. ಮೂಲ ಉದ್ಯೋಗಗಳಾದ ಕೃಷಿ, ಮೀನುಗಾರಿಕೆ ಮೊದಲಾದವುಗಳನ್ನು ಕಳೆದುಕೊಂಡಿದ್ದು, ಉದ್ಯೋಗದ ಭದ್ರತೆ ನೀಡಬೇಕು. ನೌಕಾನೆಲೆಗಾಗಿ ಭೂಮಿ ಕಳೆದುಕೊಂಡ ಎಲ್ಲರಿಗೂ ಕನಿಷ್ಠ 5ಎಕರೆ ಹಾಗೂ ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು. ಮೀನುಗಾರಿಕೆಗೆ ಸಂಬಂಧಿಸಿ ಮೀನುಗಾರಿಕಾ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು. ಇದಲ್ಲದೇ ನಿರಾಶ್ರಿತರಾಗಿರುವ ಶೇ.95ರಷ್ಟು ಮೀನುಗಾರರಿಗೆ ಮನೆ ನಿರ್ಮಿಸಿಕೊಳ್ಳಲು ಜಾಗವಿಲ್ಲ. ಹೀಗಾಗಿ ಇವರಿಗೆ ಮನೆ ನಿರ್ಮಿಸಿಕೊಳ್ಳಲು ಸಿಆರ್‌ಝಡ್ ಕಾಯ್ದೆ ಅನ್ವಯವಾಗದಂತೆ ವಿನಾಯಿತಿ ನೀಡಬೇಕು. ಅರಣ್ಯವಾಸಿ ಬಡ ಜನರಿಗೆ ವಿವಿಧ ಯೋಜನೆಯಡಿ ಪುನರ್ವಸತಿ ಒದಗಿಸಿದಂತೆ ಮೀನುಗಾರರಿಗೂ ಸಮುದ್ರದ ದಡದಲ್ಲೇ ವಸತಿಗೆ ಅವಕಾಶ ಕಲ್ಪಿಸಬೇಕು. ಬುಡಕಟ್ಟು ಜನಾಂಗವೆಂದೇ ದಾಖಲಿಸಲ್ಪಟ್ಟಿರುವ ಹಾಲಕ್ಕಿ ಒಕ್ಕಲಿಗ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕನ್ನಡ ಜಿಲ್ಲೆಯನ್ನು ನಿರಾಶ್ರಿತ ಜಿಲ್ಲೆ ಎಂದು ಘೋಷಿಸಿ ಇಲ್ಲಿಯ ಯುವಜನರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗವನ್ನು ನೀಡಬೇಕು. 1960ಕ್ಕೂ ಪೂರ್ವದಲ್ಲಿ ನೆರೆ ಸಂತ್ರಸ್ತರಿಗೆ ನೀಡಿದ ಜನತಾ ಫ್ಲಾಟ್‌ಗಳನ್ನು ಫಲಾನುಭವಿಗಳ ಹೆಸರಿಗೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಕೆ. ರಮೇಶ್, ಮೀನುಗಾರ ಮುಖಂಡ ಗುರುದಾಸ ಬಾನಾವಳಿಕರ, ಸುಧಾಕರ ಜಾಬಾವಳಿಕರ, ಹಾಲಕ್ಕಿ ಒಕ್ಕಲಿಗ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಗೌಡ, ಕೋಶಾಧ್ಯಕ್ಷ ರಮೇಶ್ ಗೌಡ, ಯುವ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪುರುಷೋತ್ತಮ ಗೌಡ, ಮಂಜುನಾಥ ಮದ್ಗೇಕರ, ರಾಜನ್ ಎಂ.ಬಿ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.