×
Ad

ಹಕ್ಕು ಪತ್ರ ನೀಡಲು ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

Update: 2016-07-20 21:39 IST

ಮಡಿಕೇರಿ, ಜು.20: ಕಡು ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ನಿವೇಶನ ಮತ್ತು ಭೂಮಿಯ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

 ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಳುತ್ತಿರುವ ಸರಕಾರಗಳು ಜನಸಾಮಾನ್ಯರ ಮೂಲಭೂತ ಹಕ್ಕುಗಳಿಗೆ ಸ್ಪಂದಿಸದೆ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 ದೇವರಾಜು ಅರಸು ಜನ್ಮದಿನಾಚರಣೆ ಆಚರಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಿರುವ ರಾಜ್ಯ ಸರಕಾರ, ಅರಸು ಅವರೇ ಜಾರಿಗೆ ತಂದಿದ್ದ ಉಳುವವನೇ ಭೂಮಿಯ ಒಡೆಯನೆಂಬ ಕಾಯ್ದೆ ಜಾರಿಗೆ ತರಲು ವಿಫಲವಾಗಿದೆ ಎಂದು ಟೀಕಿಸಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ ಮಾತನಾಡಿ, ಜಿಲ್ಲೆಯ ಸಾವಿರಾರು ಎಕರೆ ಭೂಮಿಯನ್ನು ರಾಜಕಾರಣಿಗಳು ಹಾಗೂ ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದರೂ ಈ ಬಗ್ಗೆ ಯಾವುದೇ ಸರಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ. ಬಡವರು ಒತ್ತುವರಿ ಮಾಡಿಕೊಂಡಿರುವ ಅಲ್ಪಸ್ವಲ್ಪ ಪ್ರಮಾಣದ ಭೂಮಿಯನ್ನು ಮಾತ್ರ ಸರಕಾರ ತೆರವುಗೊಳಿಸುತ್ತಿದೆ ಎಂದು ಆರೋಪಿಸಿದರು. ತಕ್ಷಣ ಉಳ್ಳವರು ಮಾಡಿಕೊಂಡಿರುವ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕೆಂದು ಅವರು ಒತ್ತಾಯಿಸಿದರು. ಈಗಾಗಲೇ ಸರಕಾರಿ ಭೂಮಿಯಲ್ಲಿ ನೆಲೆ ಕಂಡುಕೊಂಡಿರುವ ದುರ್ಬಲ ವರ್ಗಕ್ಕೆ ಹಕ್ಕು ಪತ್ರ ನೀಡದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ನಿರ್ವಾಣಪ್ಪ ಎಚ್ಚರಿಕೆ ನೀಡಿದರು.

ಕುಶಾಲನಗರ ಬಸವನಹಳ್ಳಿ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ವಾಸವಿರುವ ಬಡವರಿಗೆ ಹಕ್ಕುಪತ್ರ ನೀಡಬೇಕು, ಬಾಕಿ ಇರುವ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತರಬೇಕು, ಶ್ರೀಮಂತರ ಒತ್ತುವರಿ ಭೂಮಿಯನ್ನು ತೆರವುಗೊಳಿಸಬೇಕು, ಆದಿವಾಸಿ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು, ಎಲ್ಲ ಆದಿವಾಸಿ ಮೂಲ ನಿವಾಸಿಗಳಿಗೆ ಕನಿಷ್ಠ 5ಎಕರೆ ಭೂಮಿ ಮಂಜೂರು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಂಘದ ಪದಾಧಿಕಾರಿಗಳು ಹಾಗೂ ನಿವೇಶನ ರಹಿತರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News