×
Ad

ಕಳ್ಳಭಟ್ಟಿ ತಯಾರಿಕೆ, ಮಾರಾಟದ ವಿರುದ್ಧ ಕಠಿಣ ಕ್ರಮ: ಮೋಹನ್

Update: 2016-07-20 21:44 IST

ಸಾಗರ,ಜು.20: ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳಭಟ್ಟಿ ತಯಾರಿಕೆ ಅಕ್ಷಮ್ಯ ಅಪರಾಧವಾಗಿದ್ದು, ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಲಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಅಬಕಾರಿ ಉಪ ಆಯುಕ್ತ ವೈ.ಆರ್.ಮೋಹನ್ ತಿಳಿಸಿದ್ದಾರೆ.

ತಾಲೂಕಿನ ಮಾಸೂರಿನ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಅಬಕಾರಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಕ್ರಮ ಮದ್ಯಮಾರಾಟ, ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟ ಕುರಿತ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಇಲಾಖೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ಸಾಕಷ್ಟು ದೂರುಗಳಿದ್ದು, ಗ್ರಾಮಸ್ಥರು ಇಂತಹ ಅಕ್ರಮ ವ್ಯವಹಾರಗಳಿಗೆ ಅವಕಾಶ ಕಲ್ಪಿಸದೆ ಅಂತಹವರ ವಿರುದ್ಧ ಇಲಾಖೆಗೆ ಮಾಹಿತಿ ನೀಡಿ ಎಂದರು. ಎಎಸ್ಪಿ ನಿಶಾ ಜೇಮ್ಸ್ ಮಾತನಾಡಿ, ಕಳ್ಳಭಟ್ಟಿ ಸೇವೆನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸುವ ಕಳ್ಳಭಟ್ಟಿಯಿಂದ ಆಗುವ ಅನಾಹುದಿಂದ ಸಾವುನೋವು ಸಂಭವಿಸುತ್ತಿದೆ. ಆದರೂ ಜನರು ಸೇವನೆ ಮಾಡುವುದನ್ನು ಬಿಡುತ್ತಿಲ್ಲ. ನಿಮ್ಮನ್ನು ನಂಬಿಕೊಂಡು ಕುಟುಂಬ ಇರುತ್ತದೆ ಎನ್ನುವ ಬಗ್ಗೆ ಗಮನ ಇರಲಿ ಎಂದರು.

ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟ ಮಾಡುವವರ ಬಗ್ಗೆ ಪೊಲೀಸ್ ಇಲಾಖೆಗೆ ಅಥವಾ ಅಬಕಾರಿ ಇಲಾಖೆಗೆ ದೂರು ನೀಡಿ. ಅಂತಹವರ ಹೆಸರನ್ನು ಗುಪ್ತವಾಗಿ ಇಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಲಾಖೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಡಿ.ಲೀಲಾವತಿ, ನಿರೀಕ್ಷಕ ಅಣ್ಣಪ್ಪ, ಗ್ರಾಮಾಂತರ ಠಾಣೆ ಪಿಎಸ್ಸೈ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News