ಯೋಧ ಉಮೇಶ್‌ಗೆ ಭಾವಪೂರ್ಣ ವಿದಾಯ
ಶಿವಮೊಗ್ಗ, ಜು. 20: ಇತ್ತೀಚೆಗೆ ಹಿಮಾಚಲ ಪ್ರದೇಶದ ಖರ್ಚುಂನಲ್ಲಿ ಸೇನಾ ವಾಹನದ ಮೇಲೆ ಧರೆ ಕುಸಿದು ಮೃತ ಪಟ್ಟ ಯೋಧ ಉಮೇಶ್(38) ರವರ ಅಂತಿಮ ಸಂಸ್ಕಾರ ಬುಧವಾರ ಶಿವಮೊಗ್ಗ ತಾಲೂಕಿನ ಸ್ವಗ್ರಾಮ ವಿಠಗೊಂಡನ ಕೊಪ್ಪಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಜರಗಿತು.
ಗ್ರಾಮದ ಸರಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಿತು. ಪುತ್ರ ತನ್ಮಯ್ ಚಿತೆಗೆ ಅಗ್ನಿ ಸ್ಪರ್ಶದವಿಧಿವಿಧಾನ ನಡೆಸಿದರು. ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಅಂತಿಮ ನಮನ ಸಲ್ಲಿಸಿದರು. ಮದ್ರಾಸ್ ರೆಜಿಮೆಂಟ್‌ನ ಮೇಜರ್ ಟಿ.ಕೆ. ಗೋಪಿನಾಥ್ ಸೈನ್ಯದ ಪರ ಅಂತಿಮ ನಮನ ಅರ್ಪಿಸಿದರು. ಮೆರವಣಿಗೆ:
ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಯೋಧ ಉಮೇಶ್‌ರವರ ಪಾರ್ಥಿವ ಶರೀರವು ಮುಂಜಾನೆ ವಿಶೇಷ ವಾಹನದಲ್ಲಿ ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಗ್ರಾಮಕ್ಕೆ ಆಗಮಿಸಿತು. ಅಲ್ಲಿಂದ ಮೆರವಣಿಗೆಯಲ್ಲಿ ಮೃತದೇಹವನ್ನು ಸ್ವಗ್ರಾಮ ವಿಠಗೊಂಡನಕೊಪ್ಪಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಮನೆಯ ಮುಂಭಾಗ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ನಂತರ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರ ಸ್ಥಳಕ್ಕೆ ತರಲಾಯಿತು. ಮಳೆಯಲ್ಲಿಯೂ ಸಾವಿರಾರು ಜನರು ಉಪಸ್ಥಿತರಿದ್ದರು. ಆಕ್ರಂದನ: ಕುಟುಂಬ ಸದಸ್ಯರು, ಬಂಧು ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ ವೀಣಾ ಮತ್ತವರ ಮಕ್ಕಳು ಅಂತಿಮ ದರ್ಶನ ಪಡೆಯುವ ವೇಳೆ ನೆರೆದಿದ್ದವರ ಕಣ್ಣಾಲಿಗಳಲ್ಲಿ ನೀರು ಜಿನುಗುವಂತೆ ಮಾಡಿತ್ತು. ದುಃಖದ ಮಡುವಿನಲ್ಲಿದ್ದ ಕುಟುಂಬ ಸದಸ್ಯರನ್ನು ಊರಿನವರು ಸಂತೈಸುತ್ತಿದ್ದ ದೃಶ್ಯ ಕಂಡು ಬಂದಿತು
ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಅಂತ್ಯ ಸಂಸ್ಕಾರದ ವೇಳೆ, ಯೋಧ ಉಮೇಶ್ ಪರ ಹಾಗೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸುವ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಜನಸಾಗರ: ವಿಠಗೊಂಡನಕೊಪ್ಪಗ್ರಾಮವು ಅಕ್ಷರಶಃ ಜನರಿಂದ ತುಂಬಿ ತುಳುಕುತ್ತಿತ್ತು. ಇಡೀ ಗ್ರಾಮವೇ ಅಂತ್ಯ ಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು. ಸುತ್ತಮುತ್ತಲಿನ ಗ್ರಾಮದವರು ಮಾತ್ರವಲ್ಲದೆ ಶಿವಮೊಗ್ಗ ನಗರದಿಂದಲೂ ನ ೂರಾರು ಜನರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ, ಯೋಧನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಗಣ್ಯರ ನಮನ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ, ಕಾರಿಪುರ ಕ್ಷೇತ್ರದ ಶಾ
ಸಕ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಸೇರಿದಂತೆ ಹಲವು ಗಣ್ಯರು ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಪತ್ನಿಯೊಂದಿಗೆ ಮಾತನಾಡಿದ್ದೇ ಅಂತಿಮ: ಉ
ಮೇಶ್‌ರವರು ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ರವಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಮೊಬೈಲ್‌ನಲ್ಲಿ ಪತ್ನಿ ವೀಣಾರೊಂದಿಗೆ ಮಾತನಾಡಿದ್ದರು. ಇದಾದ ನಂತರ ವೀಣಾರವರು 10:30 ಕ್ಕೆ ಪತಿಯ ಮೊಬೈಲ್‌ಗೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಮಧ್ಯಾಹ್ನ 12:30 ರ ಸುಮಾರಿಗೆ ವೀಣಾ ಅವರ ಮೊಬೈಲ್‌ಗೆ ಕರೆಯೊಂದು ಬಂದಿದೆ. ಕರೆ ಮಾಡಿದವರು ಹಿಂದಿಯಲ್ಲಿ ಮಾತನಾಡಿದ್ದಾರೆ. ಭಾಷೆ ಅರ್ಥವಾಗದ ಕಾರಣದಿಂದ ಹಿಂದಿ ಭಾಷೆ ಬಲ್ಲ ಗ್ರಾಮದವರಿಗೆ ಮೊಬೈಲ್ ನೀಡಿದ್ದಾರೆ. ಹಿಮಾಚಲ ಪ್ರದೇಶದ ಖರ್ಚುಂ ಎಂಬ ಪ್ರದೇಶದಲ್ಲಿ ಉಮೇಶ್ ತೆರಳುತ್ತಿದ್ದ ಸೇನಾ ವಾಹನದ ಟ್ರಕ್ ಮೇಲೆ ಧರೆ ಕುಸಿದು ಉಮೇಶ್‌ರವರು ಅಸುನೀಗಿದ ವಿಷಯ ಗೊತ್ತಾಗಿದೆ. ಇದು ಇಡೀ ಕುಟುಂಬ ಸದಸ್ಯರಿಗೆ ಬರ ಸಿಡಿಲು ಬಡಿದಂತಾಗಿತ್ತು. 15 ವರ್ಷಗಳ ಅವಿರತ ಸೇವೆ...: ಯೋ
ಧ ಉಮೇಶ್ ಅವರು ಕೆಂಚಮ್ಮರವರ ಐವರು ಪುತ್ರರಲ್ಲಿ ನಾಲ್ಕನೆಯವರಾಗಿದ್ದಾರೆ. ಬಡತನದ ಬೇಗೆಯಲ್ಲಿಯೇ ಉಮೇಶ್ ವಿಠಗೊಂಡನಕೊಪ್ಪದಲ್ಲಿ ಪ್ರಾಥಮಿಕ, ಹಾರ್ನಳ್ಳಿಯಲ್ಲಿ ಪ್ರೌಢಶಾಲೆ ಹಾಗೂ ಆಯನೂರಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಅವರು 22 ನೆ ವಯಸ್ಸಿನಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು. ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವೆಡೆ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸೇನೆಯಲ್ಲಿ ತಮ್ಮ ನಿಗದಿತ ಸೇವೆ ಪೂರ್ಣಗೊಂಡ ಬಳಿಕ ಮತ್ತೆ 2 ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದ ಉಮೇಶ್, ಆರು ತಿಂಗಳ ಹಿಂದಷ್ಟೆ ಮತ್ತೆ ಸೇನೆಯಲ್ಲಿ ಮುಂದುವರಿದಿದ್ದರು.