×
Ad

ಉತ್ತಮ ಬಾಂಧವ್ಯ ಯಶಸ್ಸಿಗೆ ದಾರಿ: ಡಿವೈಎಸ್ಪಿ ರಾಜನ್

Update: 2016-07-20 21:53 IST

ಕಡೂರು,ಜು.20: ಅಧಿಕಾರಿಗಳು ಕರ್ತವ್ಯದಲ್ಲಿ ಯಶಸ್ಸು ಪಡೆಯಲು ತಮ್ಮ ಸಿಬ್ಬಂದಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಸಾಧ್ಯ ಎಂದು ತರೀಕೆರೆ ಡಿವೈಎಸ್ಪಿ ರಾಜನ್.ವೈ.ನಾಯಕ್ ತಿಳಿಸಿದ್ದಾರೆ.

ಅವರು ಪಟ್ಟಣದ ಟಿಡಿಎಸ್ ಟವರ್‌ನಲ್ಲಿ ಕಡೂರು ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಸಿ.ಮಧುಸೂದನ್ ಅವರಿಗೆ ಕಡೂರು ವೃತ್ತದ ಪೊಲೀಸ್ ಸಿಬ್ಬಂದಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ತಮ್ಮ ಅವಧಿಯಲ್ಲಿ ಯಾವುದೇ ರೀತಿಯ ವಿವಾದಕ್ಕೆ ಎಡೆಮಾಡಿಕೊಡದಂತೆ ಮತ್ತು ಕಪ್ಪುಚುಕ್ಕೆ ಇಲ್ಲದೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮಧುಸೂದನ್ ಅವರಿಗೆ ಇಲಾಖೆಯಲ್ಲಿ ಹೆಚ್ಚಿನ ಸ್ಥಾನಮಾನಗಳು ಲಭ್ಯವಾಗಲಿ ಎಂದು ಹಾರೈಸಿದರು.

  ಪ್ರಾಸ್ತಾವಿಕವಾಗಿ ಕಡೂರು ಆರಕ್ಷಕ ಉಪನಿರೀಕ್ಷಕ ರಾಮಚಂದ್ರ ನಾಯಕ್ ಮಾತನಾಡಿ, ಮಧುಸೂದನ್ ಅವರು ತಮ್ಮ ಸೌಜನ್ಯಯುತ ನಡವಳಿಕೆಯಿಂದ ನಮ್ಮೆಲ್ಲರ ಮನಸ್ಸಿನಲ್ಲಿ ನೆಲೆಯೂರಿದ್ದರು. ಸವಾಲೆನಿಸುವಂತಹ ಹಲವು ಪ್ರಕರಣಗಳನ್ನು ಭೇದಿಸಿ ಆ ಕೀರ್ತಿಯನ್ನು ಸಿಬ್ಬಂದಿಗೆ ಅರ್ಪಿಸುತ್ತಿದ್ದರು ಎಂದರು.

ಅಭಿನಂದನೆ ಸ್ವೀಕರಿಸಿ ಸಿ. ಮಧುಸೂದನ್ ಮಾತನಾಡಿ, ಕರ್ತವ್ಯದ ಸಮಯದಲ್ಲಿ ಕಡೂರು ವೃತ್ತದ ಎಲ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಹಾಗೂ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿಯ ಸಹಕಾರ ತಮ್ಮ ಯಶಸ್ಸಿಗೆ ಕಾರಣವಾಯಿತು ಎಂದರು.

 ಇದೇ ಸಂದರ್ಭ ಮಧುಸೂದನ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಆರಕ್ಷಕ ಉಪನಿರೀಕ್ಷಕ ರಮೇಶ್ ಗೌಡ, ಹಾಲಪ್ಪ, ಬಸವರಾಜು, ಲಿಂಗರಾಜು, ಸಚಿನ್, ಅಪರಾಧ ವಿಭಾಗದ ಲೋಕೇಶ್, ಸವಿತಾ ಮಧುಸೂದನ್ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News