ಹಾಸನ: ದಯಾಶಂಕರ್‌ಸಿಂಗ್ ಹೇಳಿಕೆ ಖಂಡಿಸಿ ಬಿಎಸ್ಪಿಯಿಂದ ಪ್ರತಿಭಟನೆ
ಹಾಸನ, ಜು.21: ಬಿಜೆಪಿ ಮುಖಂಡ ದಯಾಶಂಕರ್‌ಸಿಂಗ್ ಹೇಳಿಕೆ ಖಂಡಿಸಿ ಬಹುಜನ ಸಮಾಜ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಎನ್.ಆರ್. ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ಕೆಲಸ ಸಮಯ ವಾಹನ ಸಂಚಾರಕ್ಕೆ ತಡೆ ಒಡ್ಡಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿ.ಎಂ. ರಸ್ತೆಯಲ್ಲಿ ದಯಾಶಂಕರ್‌ಸಿಂಗ್ ಪ್ರತಿಕೃತಿ ದಹಿಸಿ ವಿರುದ್ಧ ಘೋಷಣೆ ಕೂಗಿದರು.
ಬಿಎಸ್ಪಿಯ ರಾಷ್ಟ್ರೀಯ ಅಧ್ಯಕ್ಷೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಬಗ್ಗೆ ಬಿಜೆಪಿ ಮುಖಂಡ ಅವಹೇಳನಕಾರಿ ಮಾತುಗಳನ್ನಾಡಿರುವುದು ಕೋಟ್ಯಾಂತರ ಜನರ ಮನಸ್ಸಿಗೆ ನೋವುಂಟು ಮಾಡಿದೆ. ಮಾಯಾವತಿ ಅವರಿಗೆ ಇರುವ ಜನಾಭಿಪ್ರಾಯದ ಅಲೆಯನ್ನು ನೋಡಿ ಸಹಿಸಲಾಗದೆ ಹತಾಷೆಗೊಂಡು ಆಡಿರುವ ಮಾತುಗಳೆಂದು ವ್ಯಂಗ್ಯವಾಡಿದರು. ಹಿಂದುತ್ವದ ಪ್ರತಿಪಾದಕರು ಎಂದು ಹೇಳಿಕೊಂಡಿರುವ ಬಿಜೆಪಿ ಮುಖಂಡರ ನಿಜವಾದ ಬಣ್ಣ ಬಯಲಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕ ಎ.ಪಿ.ಅಹ್ಮದ್, ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್, ರಾಜ್ಯ ಸಮಿತಿ ಸದಸ್ಯ ಕುಮಾರ್ ಗೌರವ್, ಗಂಗಾಧರ, ಶಿವಮ್ಮ, ಜಿಲ್ಲಾ ಕಾರ್ಯದರ್ಶಿ ಹರೀಶ್, ಕಚೇರಿ ಕಾರ್ಯದರ್ಶಿ ಸ್ಟೀವನ್ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ದೇವರಾಜು, ಡಿ.ಎಸ್. ಮಹೇಶ್, ಯೋಗೇಶ್ ಇತರರು ಪಾಲ್ಗೊಂಡಿದ್ದರು.