×
Ad

ಹಾಸನ ಉಪವಿಭಾಗಾಧಿಕಾರಿ ಆತ್ಮಹತ್ಯೆ ಯತ್ನ

Update: 2016-07-21 21:00 IST

ಹಾಸನ, ಜು.21: ಉಪವಿಭಾಗಾಧಿಕಾರಿ ವಿಜಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವರ್ಗಾವಣೆಗೆ ಸಂಬಂಧಿಸಿದಂತೆ ವಿವಾದಕ್ಕೆ ಸಿಲುಕಿದ್ದ ಅವರು ಕಳೆದ ಹಲವು ದಿನಗಳಿಂದ ತಮ್ಮ ನಿವಾಸದಲ್ಲೇ ಉಳಿದುಕೊಂಡಿದ್ದರು. ಗುರುವಾರ ಮಧ್ಯಾಹ್ನದ ವೇಳೆ ತಮ್ಮ ಕೊಠಡಿಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ಕುಟುಂಬದವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಘಡನೆಯ ಹಿನ್ನಲೆ: ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಾ ಮೇಲೆ ರೈತರಿಂದ ಹಣ ವಸೂಲಿ, ಅಧಿಕಾರ ದುರುಪಯೋಗ ಸೇರಿದಂತೆ ಸಾಕಷ್ಟು ಆರೋಪಗಳಿದ್ದವು. ಹೀಗೆ ಸಾರ್ವಜನಿಕ ವಲಯದಲ್ಲಿ ಅಸಹನೆಗೆ ಕಾರಣರಾಗಿದ್ದ ಅವರನ್ನು ವರ್ಗಾವಣೆಗೊಳಿಸುವಂತೆ ಜನಪರ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸಿದ್ದವು. ಇದರ ಜೊತೆಗೆ ಇತ್ತೀಚೆಗಷ್ಟೆ ಇವರನ್ನು ಹಿಮ್ಸ್ ನ ಆಡಳಿತಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿ ಪಾಂಡವಪುರದ ಉಪವಿಭಾಗಾಧಿಕಾರಿ ಹೆಚ್.ಎಲ್ ಮಂಜುನಾಥ್‌ರನ್ನು ಅವರ ಸ್ಥಾನಕ್ಕೆ ನಿಯೋಜನೆ ಮಾಡಿತ್ತು. ಅದರಂತೆ ಹಿಮ್ಸ್ ಅಧಿಕಾರ ಸ್ವೀಕರಿಸಿದ ವಿಜಯಾ ನಂತರ ಕೆಎಟಿಯಿಂದ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು. ತೀವ್ರ ವಿವಾದದ ಸ್ವರೂಪ ಪಡೆದ ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ವಿಜಯಾ ಬಗ್ಗೆ ಅಸಹನೆ ಹೆಚ್ಚುವಂತೆ ಮಾಡಿತ್ತು. ಇದರಿಂದ ಮಾನಸಿಕವಾಗಿ ನೊಂದ ವಿಜಯಾ ತಾನು ಕರ್ತವ್ಯದಲ್ಲಿ ಮುಂದುವರೆಯಬಹುದೇ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅವರ ಪತ್ರವನ್ನು ಸರ್ಕಾರಕ್ಕೆ ರವಾನಿಸಿದ್ದ ಜಿಲ್ಲಾಧಿಕಾರಿ ಉಮೇಶ್ ಕುಸುಗಲ್ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು. ಒಟ್ಟಾರೆ ಬೆಳವಣಿಗೆಗಳಿಂದ ಬೇಸತ್ತ ವಿಜಯಾ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News